ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಭರತನೂ ಅಲ್ಲ, ಔರಂಗಜೇಬನೂ ಅಲ್ಲ: ಸದಾನಂದ ಗೌಡ (Sadananda Gowda | BJP | Hi commond | Manmohan Singh | Yeddyurappa | Karnataka)
ನಾನು ಭರತನೂ ಅಲ್ಲ, ಔರಂಗಜೇಬನೂ ಅಲ್ಲ: ಸದಾನಂದ ಗೌಡ
ನವದೆಹಲಿ, ಬುಧವಾರ, 10 ಆಗಸ್ಟ್ 2011( 13:40 IST )
PR
ಆಡಳಿತದಲ್ಲಿ ನಾನೊಬ್ಬ ನಾಯಕ ಮಾತ್ರ. ಇದರಲ್ಲಿ ಎಲ್ಲರ ಸಹಕಾರವೂ ಬೇಕು. ಆದರೆ ನಾನು ಭರತನೂ ಅಲ್ಲ, ಮೊಘಲ್ ಸಾಮ್ರಾಜ್ಯದ ಔರಂಗಜೇಬನೂ ಅಲ್ಲ ಎಂದು ಮಾರ್ಮಿಕವಾಗಿ ನುಡಿದವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.
ರಾಜಧಾನಿ ಕರ್ನಾಟಕ ಭವನದಲ್ಲಿ ಬಿಜೆಪಿ ಸಂಸದರ ಜತೆ ಚಹಾಕೂಟ ನಡೆಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ಸಂಪುಟಕ್ಕೆ ರೆಡ್ಡಿ ಸಹೋದರ ಸೇರ್ಪಡೆ, ಯಡಿಯೂರಪ್ಪನವರ ಸಲಹೆ ಮೇರೆಗೆ ನೀವು ಕಾರ್ಯನಿರ್ವಹಿಸುತ್ತಿದ್ದೀರಿ ಎಂಬ ಊಹಾಪೋಹ ಇದೆಯಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ನಾನು ಭರತನೂ ಅಲ್ಲ, ಔರಂಗಜೇಬನೂ ಅಲ್ಲ. ನನಗೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇಲ್ಲ. ಆಕಸ್ಮಿಕವಾಗಿ ಮುಖ್ಯಮಂತ್ರಿಗಾದಿಗೆ ಏರಿದ್ದೇನೆ. ಆಡಳಿತದಲ್ಲಿ ನಾನೊಬ್ಬ ನಾಯಕ ಮಾತ್ರ. ಇಲ್ಲಿ ಶಾಸಕರು, ಅಧಿಕಾರಿಗಳು ಫೀಲ್ಡರ್ಸ್. ಯಾರು ಉತ್ತಮ ಬೌಲಿಂಗ್ ಮಾಡ್ಬೇಕು, ಯಾರು ವಿಕೆಟ್ ತೆಗೆಯಬೇಕು ಎಂಬುದು ತಂಡದಲ್ಲಿದ್ದವರ ಕೆಲಸ. ಒಟ್ಟಾರೆ ನಮ್ಮ ಸಿಕ್ಸರ್, ಬೌಂಡರಿಯನ್ನು ನೋಡಿ ಜನ ಚಪ್ಪಾಳೆ ತಟ್ಟಬೇಕೆಂಬುದು ನನ್ನ ಕನಸು ಎಂದು ಕ್ರಿಕೆಟ್ ತಂಡದ ಮೂಲಕ ತಮ್ಮ ಕಾರ್ಯವೈಖರಿಯನ್ನು ವಿವರಿಸಿದರು.
ರಾಜ್ಯದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ ಮುಖ್ಯಮಂತ್ರಿಗಳು, ನಾನು ಏನು ಅನ್ನೋದನ್ನ ಕಾದು ನೋಡಿ ಎಂದರು.
ರಾಜ್ಯಕ್ಕೆ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಆ ಸಂದರ್ಭದಲ್ಲಿ ನಾನು ಅವರಲ್ಲಿ ತಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿರುವುದಾಗಿ ಹೇಳಿದೆ. ಆಗ ಪ್ರಧಾನಿ ತಾನೂ ಕೂಡ ಆಕಸ್ಮಿಕವಾಗಿ ಪ್ರಧಾನಿ ಪಟ್ಟಕ್ಕೆ ಬಂದಿದ್ದೇನೆ ಎಂದರು. ಪ್ರಧಾನಿ ಭೇಟಿ ನನ್ನ ಜೀವಮಾನದ ಅತ್ಯಂತ ಪವಿತ್ರ ದಿನವಾಗಿದೆ ಎಂದು ಬಣ್ಣಿಸಿದರು.
ಪಕ್ಷದ ವರಿಷ್ಠರ ಸಲಹೆಯಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಕೆಲವು ಕ್ರಮ ಕೈಗೊಂಡಿದ್ದೇವೆ. ಆದರೆ ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇನೆ ಎಂಬ ಹುಚ್ಚು ಕಲ್ಪನೆ ನನ್ನಲ್ಲಿ ಇಲ್ಲ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರದ ಸಚಿವರು, ಪ್ರಧಾನಿಗೆ ಮನವಿ ಮಾಡಲಾಗಿದೆ. ಮೆಟ್ರೋಗೆ ಹೆಚ್ಚುವರಿ ಅನುದಾನ ನೀಡಲೂ ಕೂಡ ಮನವಿ ಮಾಡಿಕೊಂಡಿದ್ದು, ಸೆಪ್ಟೆಂಬರ್ ಒಳಗೆ ಮೆಟ್ರೋ ಆರಂಭಕ್ಕೆ ಮನವಿ ಮಾಡಿರುವುದಾಗಿ ಸದಾನಂದ ಗೌಡ ತಿಳಿಸಿದರು.