ಸಚಿವ ಸ್ಥಾನಕ್ಕಾಗಿ ಹೆಚ್ಚಿದ, ಲಾಬಿಯಿಂದಾಗಿ ಪಕ್ಷದೊಳಗೆ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯಿರುವುದರಿಂದ ಎರಡನೇ ಹಂತದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಈ ನಡುವೆ ಸಂಪುಟ ವಿಸ್ತರಣೆಗೆ ಅನುಮತಿ ಕೋರಿಕೆಗೆ ಸಿಎಂ ಸದಾನಂದ ಗೌಡ ಅವರು ನವದೆಹಲಿಗೆ ಪಯಣಿಸಿದ್ದಾರೆ.
ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿರುವ ಸಿಎಂ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದು, ಇಂದೇ ಅಥವಾ ನಾಳೆ ಎಂಡನೇ ಕಂತಿನ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. ಆದರೆ ಹೊಸ ಸಂಪುಟದಲ್ಲಿ ಯಾರನ್ನು ಸೇರಿಸಬೇಕು ಯಾರನ್ನು ಕೈಬಿಡಬಿಡಬೇಕು ಎಂಬುದು ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ.
ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ರೆಡ್ಡಿ ಸಹೋದರರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಬಾಲಚಂದ್ರ ಜಾರಕಿಹೊಳಿ ತಂಡ ಹಾಗೂ ಜಗದೀಶ್ ಶೆಟ್ಟರ್ ಬಣಗಳ ಆಪ್ತರು ಸಹ ಒತ್ತಡದ ತಂತ್ರವನ್ನು ಮುಂದುವರಿಸಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.
ಬುಧವಾರ ಸಂಜೆ ದೆಹಲಿಯಿಂದ ವಾಪಾಸಾಗಿದ್ದ ಸಿಎಂ ಸದಾನಂದ ಗೌಡ ಅವರು ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಮತ್ತು ಮತ್ತಿತರ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದು, ಸಂಪುಟ ವಿಸ್ತರಣೆ ಮುಂದೂಡುವುದು ಬೇಡ ಎಂಬ ನಿಲುವಿಗೆ ಬಂದಿದ್ದಾರೆ. ಆದರೆ ರೆಡ್ಡಿ ಸಹೋದರರು ಬಿಗಿ ಪಟ್ಟು ಹಿಡಿದಿದ್ದರಿಂದ ಕಂಟಕ ಎದುರಾಗಿದೆ.
ಅಕ್ರಮ ಗಣಿಗಾರಿಕೆ ವರದಿಯಲ್ಲಿ ವಿ. ಸೋಮಣ್ಣ ಹೆಸರು ಪ್ರಸ್ತಾಪವಿದ್ದರೂ ಅವರಿಗೆ ಸಚಿವ ಸ್ಥಾನ ನೀಡಿರುವುದು ರೆಡ್ಡಿ ಬ್ರದರ್ಸ್ ಅಸಾಮಾಧಾನಕ್ಕೆ ಕಾರಣವಾಗಿದೆ. ಇದನ್ನೇ ಪ್ರಮುಖ ಆಯುಧವಾಗಿ ಉಪಯೋಗಿಸಿಕೊಂಡಿರುವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ತಮಗೂ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ರೆಡ್ಡಿ ಬ್ರದರ್ಸ್ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಶಾಸಕರ ಬೆಂಬಲದೊಂದಿಗೆ ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡಲು ಯಶಸ್ವಿಯಾಗಿದ್ದ ಯಡಿಯೂರಪ್ಪ ಇದಕ್ಕೆ ಪ್ರತಿಯಾಗಿ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಅವರೆಲ್ಲರು ಯಡಿಯೂರಪ್ಪ ಬೆನ್ನಿಗೆ ಬಿದ್ದಿದ್ದು, ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ವರಿಷ್ಠರು, ಈಶ್ವರಪ್ಪ ಹಾಗೂ ಸಿಎಂ ಸೇರಿದಂತೆ ಪ್ರಮುಖರು ಮಾತುಕತೆ ನಡೆಸಿ ನಿರ್ಧಾರಕ್ಕೆ ಬಂದ ಬಳಿಕವೇ ಸಂಪುಟ ವಿಸ್ತರಣೆ ದಿನ ನಿಗದಿಯಾಗಲಿದೆ. ಆದರೆ ಸಚಿವ ಸ್ಥಾನ ಆಕಾಂಕ್ಷಿಗಳಿಂದ ಲಾಬಿ ಹೆಚ್ಚಿರುವುದರಿಂದ ಎಲ್ಲರನ್ನು ತೃಪ್ತಿ ಪಡಿಸಲು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.