ಸಮಾಜಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಹಜಾರೆ ಬಂಧಿಸಿದ ಕೇಂದ್ರ ಸರಕಾರದ ವಿರುದ್ಧ ಯುವಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಾಂಧಿವಾದಿಗಳು ಬೆಳಗ್ಗೆ 10 ಗಂಟೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಅಣ್ಣಾ ಹಜಾರೆ ಮುಖವಾಡ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳಿಗೆ ಪಾಠ ಕಲಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಣ್ಣಾ ಹಜಾರೆ ಅವರನ್ನು ಬಂಧಿಸಿರುವುದಕ್ಕೆ ಮಾಜಿ ಲೋಕಾಯುಕ್ತ ಹಾಗೂ ಲೋಕಪಾಲ ಕರಡು ರಚನಾ ಸಮಿತಿ ಸಮಿತಿ ಸದಸ್ಯ ಸಂತೋಷ್ ಹೆಗ್ಡೆ ಅವರು ತೀವ್ರವಾಗಿ ಖಂಡಿಸಿದರು.
ಸಂಸತ್ತಿನಲ್ಲಿ ಯಾವುದೇ ಮಸೂದೆ ಮಂಡನೆಯಾಗಬೇಕಾದರೂ ಜನ ಪ್ರತಿನಿಧಿಗಳು ಜನರೊಂದಿಗೆ ಚರ್ಚಿಸಬೇಕು. ಅವರು ಜನರ ಪ್ರತಿನಿಧಿಯಾಗಿ ಯಾವುದೇ ಕಾನೂನು ರೂಪಿಸುವ ಮುನ್ನ ತಮ್ಮ ಕ್ಷೇತ್ರದ ಜನತೆಯ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಹೇಳಿದರು. ಕಾಯ್ದೆ ರೂಪಿಸಲು ನಾವಿದ್ದೇವೆ, ನೀವೇನೂ ಕರಡು ರಚಿಸುವುದು ಅಗತ್ಯವಿಲ್ಲ ಎಂದು ಹೇಳುವ ಮೂಲಕ ಉದ್ಧಟತನದ ಮಾತನಾಡಿರುವ ಜನಪ್ರತಿನಿಧಿಗಳಿಗೆ ಮತದಾರರು ತಕ್ಕ ಪಾಠ ಕಲಿಸುವಂತೆ ಹೆಗ್ಡೆ ಹೇಳಿದರು.
ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಮೈಸೂರಿನ ಗಾಂಧಿ ವೃತ್ತದಲ್ಲಿ ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರೆ, ಹಾವೇರಿಯಲ್ಲಿ ಹಜಾರೆ ಅವರನ್ನು ಬೆಂಬಲಿಸಿ ಎಬಿವಿಪಿ ಕಾರ್ಯಕರ್ತರು ಆಂದೋಲನದಲ್ಲಿ ಭಾಗಿಯಾಗಿದ್ದರು.
ಅದೇ ರೀತಿ, ಕೊಪ್ಪಳದಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಹಜಾರೆಯವರನ್ನು ಬೆಂಬಲಿಸಿ ಸಾಹಿತ್ಯ ಭವನ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಶಿವಮೊಗ್ಗ ಹಾಗೂ ಕೋಲಾರದಲ್ಲೂ ಪ್ರತಿಭಟನೆ ವ್ಯಕ್ತವಾಗಿದ್ದು, ಎಲ್ಲೆಡೆ ಜನಾಕ್ರೋಶ ಎದ್ದು ಕಾಣುತ್ತಿದೆ.