ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬಂಧನದ ಕ್ರಮ ಸರಿ ಎಂದು ಲೋಕಸಭೆಯಲ್ಲಿ ಸಮರ್ಥಿಸಿಕೊಂಡ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಅಣ್ಣಾ ಹೋರಾಟ ಬೆಂಬಲಿಸಿ ನೆರೆದಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಯಾವುದೇ ರಾಜಕೀಯ ಚಳವಳಿ ಅಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟ. ಭ್ರಷ್ಟಾಚಾರ ನಿಗ್ರಹಕ್ಕೆ ಯಾವುದೇ ಮಂತ್ರದಂಡ ಇಲ್ಲ ಎಂದು ಪ್ರಧಾನಿ ಈ ಮೊದಲು ಹೇಳಿದ್ದರು. ಆದರೆ ಬಲಿಷ್ಠ ಲೋಕಪಾಲ್ ಮಸೂದೆಯೇ ಮಂತ್ರದಂಡ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ದೇಶದ ಯುವ ಜನತೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿಯಬೇಕಾಗಿದೆ. ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರದ ವಿರುದ್ಧ ಹೇಳಿಕೆ ನಿಜಕ್ಕೂ ವಿಪರ್ಯಾಸ ಎಂದರು. ಅಣ್ಣಾ ಹಜಾರೆ ಬಂಧನ ಸರಿಯಾದ ಕ್ರಮವಲ್ಲ ಎಂದ ಅವರು, ಅಣ್ಣಾ ಹಜಾರೆ ಮತ್ತು ತಂಡದ ವಿರುದ್ಧ ಅನಾವಶ್ಯಕವಾಗಿ ಆರೋಪ ಹೊರಿಸಲಾಗುತ್ತಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.
ರಾಜಕೀಯ ಇಚ್ಛಾ ಶಕ್ತಿ ಇಲ್ಲದ ಜನಪ್ರತಿನಿಧಿಗಳಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಹೆಗ್ಡೆ, ರಾಜಕೀಯ ವ್ಯವಸ್ಥೆ ಬದಲಾಗಬೇಕಾಗಿದೆ ಎಂದು ಹೇಳಿದರು.
ಶಾಲಾ-ಕಾಲೇಜ್ ಬಂದ್: ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದ ವಿವಿಧ ಶಾಲಾ-ಕಾಲೇಜಿಲ್ಲಿ ಎಬಿವಿಪಿ ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೋರಾಟಕ್ಕಾಗಿ ಬೀದಿಗಿಳಿದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಅಣ್ಣಾಗೆ ಅಭೂತಪೂರ್ವ ಬೆಂಬಲ ದೊರೆತಿದೆ.
ಅಣ್ಣಾ ಹೋರಾಟಕ್ಕೆ ರಾಜ್ಯದ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಬೆಂಬಲ ವ್ಯಕ್ತಪಡಿಸಿದ್ದರೆ, ಧಾರವಾಡದಲ್ಲಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಬೆಂಬಲ ನೀಡಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿಗಳು ಬೈಕ್ ರಾಲಿ ನಡೆಸಿದ್ದು, ರಾಮನಗರ, ಕೊಪ್ಪಳ, ಬಳ್ಳಾರಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಭ್ರಷ್ಟಾಚಾರಿಗಳ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲ ಎಂಬ ಘೋಷಣೆ ಕೂಗಿ ಬೀದಿಗಿಳಿಸಿದ್ದು, ಮಡಿಕೇರಿಯಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾದಯಾತ್ರೆ ನಡೆಸಿದ್ದು, ಮಂಗಳೂರಿನಲ್ಲಿ ವಿದ್ಯಾರ್ಥಿಗಳು, ನಾಗರಿಕರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಅಣ್ಣಾಗೆ ಬೆಂಬಲ ನೀಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಏತನ್ಮಧ್ಯೆ ಅಣ್ಣಾ ಹಜಾರೆ ಪ್ರತಿಭಟನೆಗೆ ದೇಶವ್ಯಾಪಿ ವ್ಯಕ್ತವಾಗುತ್ತಿರುವ ಪ್ರತಿಭಟನೆಗೆ ಬೆದರಿ ಕೇಂದ್ರ ಸರ್ಕಾರ ಅಣ್ಣಾ ಬಿಡುಗಡೆಗೆ ಆದೇಶ ನೀಡಿತ್ತು. ಆದರೆ ಜೈಲಿನಿಂದ ಅಣ್ಣಾ ಹೊರಹೋಗಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಜೈಲಿನ ಅಧಿಕಾರಿಗಳು, ತಾವು ಜೈಲಿನ ಹೊರಗೆ ನಿರಶನ ಮಾಡಿ, ಜೈಲಿನೊಳಗೆ ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.