ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಣ್ಣಾಗೆ ಬೆಂಬಲ: ಹಲವೆಡೆ ಬಂದ್, ಬೀದಿಗಿಳಿದ ಚಿತ್ರೋದ್ಯಮ (Anna Hazare | Lokpal Bill | Kannada Cinema Industry | Freedom park | Protest | Bangalore)
WD
ಭ್ರಷ್ಟಾಚಾರದ ತಡೆಗಾಗಿ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ಕೊಟ್ಟಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹೋರಾಟ ಬೆಂಬಲಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೂಡ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಗೆ ಬೆಂಬಲ ನೀಡಿವೆ.

ಇಂದು ಕನ್ನಡ ಚಿತ್ರೋದ್ಯಮ ಕೂಡ ಬೀದಿಗಿಳಿದಿದೆ. ಫಿಲ್ಮಂ ಛೇಂಬರ್‌ನಿಂದ ಫ್ರೀಡಂಪಾರ್ಕ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಹಿರಿಯ ಚಿತ್ರನಟಿಯರಾದ ಬಿ.ಸರೋಜಾದೇವಿ, ಜಯಮಾಲಾ, ನಟ ವಿಜಯ್, ರಾಕ್ ಲೈನ್ ವೆಂಕಟೇಶ್, ಬಸಂತ್ ಕುಮಾರ್ ಪಾಟೀಲ್, ಚಲನಚಿತ್ರ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್ ಸೇರಿದಂತೆ ಹಲವಾರು ನಟ-ನಟಿಯರು ಸಾಥ್ ನೀಡಿದರು.

ತುಮಕೂರು, ರಾಣೆ ಬೆನ್ನೂರು ಬಂದ್:
ಅಣ್ಣಾ ಹಜಾರೆಯವರ ಆಮರಣಾಂತ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಲವು ಸಂಘಟನೆಗಳು ತುಮಕೂರು ಬಂದ್‌ಗೆ ಕರೆ ನೀಡಿದ್ದವು. ಆ ನಿಟ್ಟಿನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಣ್ಣಾ ಹೋರಾಟಕ್ಕೆ ಪೂರ್ಣ ಬೆಂಬಲ ಘೋಷಿಸಿದರು.

ಅದೇ ರೀತಿ ರಾಣೆಬೆನ್ನೂರಿನಲ್ಲಿಯೂ ಬಂದ್‌ಗೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಅಂಗಡಿ-ಮುಂಗಟ್ಟು ಬಂದ್ ಆಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಚನ್ನಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬೈಕ್ ರಾಲಿ ನಡೆಸಿದರು. ಬೀದರ್‌ನ ಹೈಕೋರ್ಟ್ ಸಂಚಾರಿ ಪೀಠದ ವಕೀಲರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೆಂಬಲ ಘೋಷಿಸಿದರು. ಅಲ್ಲದೇ ರಾಜ್ಯದ ವಿವಿಧೆಡೆಯಲ್ಲಿ ಹಲವಾರು ಸಂಘಟನೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೌಕರರು ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಜನಲೋಕಪಾಲ್ ಮಸೂದೆ, ಕನ್ನಡ ಚಿತ್ರರಂಗ, ಫ್ರೀಡಂಪಾರ್ಕ್, ಹೋರಾಟ, ಬೆಂಗಳೂರು