ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜನ ಲೋಕಪಾಲ್ ವಿರೋಧಿಗಳಿಗೆ ಮತ ಹಾಕ್ಬೇಡಿ: ಹೆಗ್ಡೆ (Lokpal Bill | Anna Hazare | Santhosh Hegde | Congress | UPA | Freedom Park)
ಜನ ಲೋಕಪಾಲ್ ವಿರೋಧಿಗಳಿಗೆ ಮತ ಹಾಕ್ಬೇಡಿ: ಹೆಗ್ಡೆ
ಬೆಂಗಳೂರು, ಗುರುವಾರ, 25 ಆಗಸ್ಟ್ 2011( 13:12 IST )
PR
ಜನಲೋಕಪಾಲ್ ವಿರೋಧಿ ಜನಪ್ರತಿನಿಧಿಗಳಿಗೆ ದಯವಿಟ್ಟು ಮತಹಾಕಬೇಡಿ. ಇನ್ಯಾರಿಗಾದ್ರೂ ಮತ ಹಾಕಿ...ಇದು ನಿವೃತ್ತ ನ್ಯಾಯಮೂರ್ತಿ, ನಾಗರಿಕ ಸಮಿತಿ ಸದಸ್ಯ ಸಂತೋಷ್ ಹೆಗ್ಡೆ ಆಕ್ರೋಶದ ನುಡಿಗಳು.
ನಗರದ ಫ್ರೀಡಂಪಾರ್ಕ್‌ನಲ್ಲಿ ಭ್ರಷ್ಟಾಚಾರ ತಡೆಗಾಗಿ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಕಳೆದ ಹತ್ತು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನಲೋಕಪಾಲ್ ಸಮಿತಿ ಸದಸ್ಯರು ಸರ್ಕಾರಕ್ಕೆ ಸಲಹೆ ನೀಡಿದರೆ, ಅದನ್ನೇ ಪ್ರಶ್ನಿಸುತ್ತಾರೆ. ನಮಗೆ ಸಲಹೆ ನೀಡಲು ನೀವು ಯಾರು ಎಂದು ರಾಜಕಾರಣಿಗಳು ದುರಂಹಕಾರದ ಮಾತುಗಳನ್ನಾಡುತ್ತಾರೆ ಎಂದು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ನಿಗ್ರಹಿಸುವ ಇಚ್ಛಾಶಕ್ತಿ ಈ ಜನಪ್ರತಿನಿಧಿಗಳಿಗೆ ಇಲ್ಲ. ಪ್ರಬಲ ಜನಲೋಕಪಾಲ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಹಿಂದೇಟು ಹಾಕುತ್ತಿರುವ ಯುಪಿಎ ಸರ್ಕಾರದ ವಿಳಂಬ ನೀತಿ ವಿರುದ್ಧ ಹೆಗ್ಡೆ ಕಿಡಿಕಾರಿದರು.
ದಯವಿಟ್ಟು ಮುಂದಿನ ಚುನಾವಣೆಯಲ್ಲಿ ಜನಲೋಕಪಾಲ್ ಮಸೂದೆ ವಿರೋಧಿ ರಾಜಕಾರಣಿಗಳಿಗೆ ಮತಹಾಕಬೇಡಿ. ಇನ್ಯಾರಿಗಾದ್ರೂ ಮತ ಹಾಕಿ ತೊಂದರೆ ಇಲ್ಲ ಎಂದು ಈ ಸಂದರ್ಭದಲ್ಲಿ ನೆರೆದ ಅಪಾರ ಪ್ರತಿಭಟನಾಕಾರರಿಗೆ ಕರೆ ನೀಡಿದರು.
ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಕಳೆದ ಹತ್ತು ದಿನಗಳಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಸಾವಿರಾರು ನಾಗರಿಕರು ಸಾಥ್ ನೀಡಿದ್ದು, ವಿದ್ಯಾರ್ಥಿಗಳು, ಚಲನಚಿತ್ರೋದ್ಯಮ, ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸುವ ಮೂಲಕ ಪ್ರತಿಭಟನೆಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.