ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಎಸ್‌ವೈ ವಿರುದ್ಧ ಪ್ರಾಸಿಕ್ಯೂಷನ್ ತಡೆಗೆ ಹೈಕೋರ್ಟ್ ನಕಾರ (BJP | Yeddyurappa | H R Bhardwaj | prosecution | High court | Land Scam | BJP)
ಬಿಎಸ್‌ವೈ ವಿರುದ್ಧ ಪ್ರಾಸಿಕ್ಯೂಷನ್ ತಡೆಗೆ ಹೈಕೋರ್ಟ್ ನಕಾರ
ಬೆಂಗಳೂರು, ಗುರುವಾರ, 25 ಆಗಸ್ಟ್ 2011( 15:38 IST )
PTI
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಯಾವುದೇ ಕಾರಣಕ್ಕೂ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಗುರುವಾರ ಅಂತಿಮ ತೀರ್ಪು ನೀಡಿದೆ.
ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಗೆ ತಡೆ ನೀಡಬೇಕೆಂದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಇಂದು ಅಂತಿಮ ತೀರ್ಪು ನೀಡುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ, ತಿಳಿಸಿದ್ದು ಆ ನಿಟ್ಟಿನಲ್ಲಿ ಗವರ್ನರ್ ಪ್ರಾಸಿಕ್ಯೂಷನ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಖುದ್ದು ಹಾಜರಾತಿ ವಿನಾಯಿತಿಗೂ ಹೈಕೋರ್ಟ್ ನಿರಾಕರಿಸಿದೆ.
ಭೂ ಹಗರಣ ಪ್ರಕರಣದಲ್ಲಿ ಶಾಮೀಲಾಗಿರುವ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ಕೋರಿ ಜಸ್ಟೀಸ್ ಲಾಯರ್ ಫೋರಂನ ವಕೀಲರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ 2010 ಡಿಸೆಂಬರ್ 28ರಂದು ಮನವಿ ಸಲ್ಲಿಸಿದ್ದರು.
ನಂತರ ಭ್ರಷ್ಟಾಚಾರದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್ ಅವರು ಜನವರಿ 21ರಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಭೂ ಹಗರಣ ಮತ್ತು ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ರಾಜ್ಯಪಾಲರು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವುದು ಇದು ಮೊದಲ ಪ್ರಕರಣವಾಗಿದೆ. ಇದರಿಂದಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಇದೀಗ ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಗೆ ತಡೆಯಾಜ್ಞೆ ನೀಡಬೇಕೆಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನೂ ತಿರಸ್ಕರಿಸಿದೆ. ಖುದ್ದು ಹಾಜರಾತಿ ವಿನಾಯಿತಿಗೂ ಹೈಕೋರ್ಟ್ ವಿಭಾಗೀಯ ಪೀಠ ನಿರಾಕರಿಸಿರುವುದರಿಂದ ಯಡಿಯೂರಪ್ಪನವರಿಗೆ ಏತನ್ಮಧ್ಯೆ ಜಾಮೀನು ಸಿಗಲಿದೆಯಾ ಅಥವಾ ಜೈಲು ಕಂಬಿ ಎಣಿಸಬೇಕಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.