ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಧನ ಭೀತಿ: ಜ್ವರದ ನೆಪದಲ್ಲಿ ಯಡಿಯೂರಪ್ಪ ಕೋರ್ಟ್‌ಗೆ ಗೈರು (BJP | Yeddyurappa | Lokayukta Court | Land Scam | Lokayukta | High court | Dnotification)
ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಅನಾರೋಗ್ಯದ ನೆಪವೊಡ್ಡಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದು, ಯಡಿಯೂರಪ್ಪ ಆ.29ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದೆ.
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 27ರಂದು ಬಿ.ಎಸ್.ಯಡಿಯೂರಪ್ಪ ಖುದ್ದು ಕೋರ್ಟ್‌ಗೆ ಹಾಜರಾಗಬೇಕೆಂದು ಲೋಕಾಯುಕ್ತ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಏತನ್ಮಧ್ಯೆ ಬಂಧನದ ಭೀತಿಯಲ್ಲಿದ್ದ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು.
ಆ ನಿಟ್ಟಿನಲ್ಲಿ ಯಡಿಯೂರಪ್ಪ ಲೋಕಾಯುಕ್ತ ಕೋರ್ಟ್‌ಗೆ ಖುದ್ದು ಹಾಜರಾಗುತ್ತಾರಾ ಅಥವಾ ಗೈರು ಹಾಜರಾಗುತ್ತಾರಾ ಎಂಬ ಕುತೂಹಲ ಮೂಡಿಸಿತ್ತು. ನಿರೀಕ್ಷೆಯಂತೆ ತಮ್ಮ ಕಕ್ಷಿದಾರರಿಗೆ (ಯಡಿಯೂರಪ್ಪ) ಹೃದಯ ಸಂಬಂಧಿ ಖಾಯಿಲೆ, ರಕ್ತದೊತ್ತಡ, ಮಧುಮೇಹ ಹಾಗೂ ಜ್ವರದಿಂದ ಬಳಲುತ್ತಿದ್ದು, ಅವರು ಯಾವುದೇ ಕಾರಣಕ್ಕೂ ಹೊರಗೆ ತಿರುಗಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕೆಂದು ಮಾಜಿ ಸಿಎಂ ಪರ ವಕೀಲ ರವಿ ಬಿ.ನಾಯಕ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ಆದರೆ ವಾದ ಆಲಿಸಿದ ನಂತರ ಲೋಕಾಯುಕ್ತ ನ್ಯಾಯಮೂರ್ತಿ, ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯರಲ್ಲಿ ನಿಮ್ಮದು ಏನಾದರೂ ಆಕ್ಷೇಪ ಇದೆಯಾ ಎಂದು ಕೇಳಿದ್ದರು. ರಕ್ತದೊತ್ತಡ, ಮಧುಮೇಹ ಖಾಯಿಲೆಗಳು ಏಕಾಏಕಿ ಬರುವಂತಹದ್ದಲ್ಲ. ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಸೋಮವಾರ ಹೊರಬೀಳಲಿದ್ದು, ಆ ನಿಟ್ಟಿನಲ್ಲಿ ಅವರು ಗೈರು ಹಾಜರಾಗಿದ್ದಾರೆ. ಹಾಗಂತ ಅವರ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕಾಗಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು.
ಉಭಯ ವಕೀಲರ ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು, ಬಿ.ಎಸ್.ಯಡಿಯೂರಪ್ಪ ಆಗಸ್ಟ್ 29ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿ, ವಿಚಾರಣೆ ಸೋಮವಾರಕ್ಕೆ ಮುಂದೂಡಿದರು.
ಅಂತೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪನವರಿಗೆ ಬೇಲಾ ಅಥವಾ ಜೈಲಾ ಎಂಬುದು ಸೋಮವಾರ ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ನಿರ್ಧಾರವಾಗಲಿದೆ. ಆದರೆ ಅವರು ಆ.29ರಂದು ಮಧ್ಯಾಹ್ನ 3ಗಂಟೆಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲೇಬೇಕಾಗಿರುವುದು ಅನಿವಾರ್ಯವಾಗಿದೆ.