ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕುಮಾರಸ್ವಾಮಿ ಬಾಯಿ ಮುಚ್ಚಿಕೊಂಡಿರಬೇಕು: ದೇವೇಗೌಡ (Kumaraswamy | Deve gowda | Lokayukta | Santhosh hegde | Illegal Mining Report | Latest News in Kannada | Kannada News | Karnataka News | Latest Karnat)
ಕುಮಾರಸ್ವಾಮಿ ಬಾಯಿ ಮುಚ್ಚಿಕೊಂಡಿರಬೇಕು: ದೇವೇಗೌಡ
ಬೆಂಗಳೂರು, ಶುಕ್ರವಾರ, 2 ಸೆಪ್ಟೆಂಬರ್ 2011( 09:36 IST )
PR
ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರನ್ನು ಟೀಕಿಸುವ ಮೂಲಕ ಸಾರ್ವಜನಿಕವಾಗಿ ಮುಜುಗರಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಇನ್ನು ಮುಂದಾದರೂ ಬಾಯಿ ಬಿಡದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ನಾಯಕರು ತಾಕೀತು ಮಾಡಿದ್ದಾರೆ.
ಲೋಕಾಯುಕ್ತ ವರದಿಯ ಕುರಿತು ನ್ಯಾಯಾಲಯದಲ್ಲಿಯೇ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಆ ವರದಿಯನ್ನೇ ಸಂಶಯ ಪಡುವ ರೀತಿಯಲ್ಲಿ ಹೆಗ್ಡೆ ಅವರ ಬಗ್ಗೆ ಹೇಳಿಕೆ ನೀಡಬಾರದಿತ್ತು. ಒಮ್ಮೆ ದೇವೇಗೌಡರು ಕ್ಷಮೆಯಾಚಿಸಿದ ನಂತರ ಮತ್ತೊಮ್ಮೆ ಟೀಕೆ ಮಾಡುವಂತಹ ಅಗತ್ಯವಿರಲಿಲ್ಲ ಎಂದು ಸ್ವತಃ ದೇವೇಗೌಡ, ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಹಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್, ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಸೇರಿದಂತೆ ಬಹುತೇಕ ಹಿರಿಯ ಮುಖಂಡರು ಬುದ್ಧಿ ಹೇಳಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ನಡೆಯುತ್ತಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದು ಸರಿಯಲ್ಲ. ಈಗ ಎಷ್ಟು ಮೌನವಾಗಿರಬೇಕೋ ಅಷ್ಟು ಒಳ್ಳೆಯದು, ಆದ್ದರಿಂದ ಮುಂದೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಾಗಲಿ, ಖಾಸಗಿ ಚಾನೆಲ್‌ಗಳ ಮೈಕ್ ಕಂಡ ಕೂಡಲೇ ಮಾತನಾಡುವುದಾಗಲಿ ಮಾಡದಿರುವಂತೆ ಸೂಚಿಸಿದ್ದಾರೆ.
ಹಿಂದೆ ದೇವೇಗೌಡರು ಬಾಯಿಗೆ ಬೀಗ ಹಾಕುವಂತೆ ಸೂಚಿಸಿದ್ದ ಸಂದರ್ಭದಲ್ಲಿ ಕೆಲವು ದಿನಗಳ ಕಾಲ ಕುಮಾರಸ್ವಾಮಿ ಮಾಧ್ಯಮಗಳಿಂದ ದೂರ ಉಳಿದಿದದ್ರು. ಆದರೆ ಮತ್ತೆ ತಮ್ಮ ಹಳೆಯ ಚಾಳಿಯಂತೆ ಸಂತೋಷ್ ಹೆಗ್ಡೆ ವಿರುದ್ಧ ಟೀಕೆ ಮಾಡಿದ್ದರು. ಇದರಿಂದ ದೇವೇಗೌಡರು ತೀವ್ರ ಬೇಸರಗೊಂಡು ಪುತ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.