ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಇನ್ನೆಷ್ಟು ದಿನ ಅಧಿಕಾರದಲ್ಲಿರುತ್ತೇನೋ ಗೊತ್ತಿಲ್ಲ: ಸದಾನಂದ ಗೌಡ (Sadanada Gowda | Yeddyurappa | BJP | Ishwarappa | Latest News in Kannada | Karnataka News | Latest Karnataka News | Bangalore | Latest Political News)
ಇನ್ನೆಷ್ಟು ದಿನ ಅಧಿಕಾರದಲ್ಲಿರುತ್ತೇನೋ ಗೊತ್ತಿಲ್ಲ: ಸದಾನಂದ ಗೌಡ
ಬೆಂಗಳೂರು, ಶನಿವಾರ, 3 ಸೆಪ್ಟೆಂಬರ್ 2011( 17:49 IST )
PR
ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸ್ವಾಮೀಜಿಗಳ ಆಶೀರ್ವಾದವೇ ಕಾರಣ ಎಂದಿರುವ ಡಿ.ವಿ.ಸದಾನಂದ ಗೌಡ ಇನ್ನೆಷ್ಟು ದಿನ ಅಧಿಕಾರದಲ್ಲಿರುತ್ತೇನೋ ಗೊತ್ತಿಲ್ಲ ಎಂದು ಈ ಸಂದರ್ಭದಲ್ಲಿ ಹೇಳುವ ಮೂಲಕ ಮುಂದಿನ ದಿನಗಳ ರಾಜಕೀಯ ಬದಲಾವಣೆ ಕುರಿತು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
ನಗರದ ಕೆಂಗೇರಿಯಲ್ಲಿರುವ ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜಿನ ಲಿವಿಂಗ್ ಹಾಗೂ ಮೆಕ್ಯಾನಿಕಲ್ ವಿಭಾಗಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮೀಜಿಗಳು ಮಠದ ಪತ್ರಿಕೆಯಲ್ಲಿ ಸ್ವಾರ್ಥ ಬಿಟ್ಟು, ದುರಾಸೆಯನ್ನು ದೂರವಿಟ್ಟು ಕೆಲಸ ಮಾಡುವ ಅಗತ್ಯ ಇದೆ ಎನ್ನುವುದನ್ನು ಹೇಳಿದ್ದಾರೆ. ಅದನ್ನೇ ಆದರ್ಶವಾಗಿಟ್ಟುಕೊಂಡು ಒಳ್ಳೆಯ ಕೆಲಸ ಮಾಡುವುದಾಗಿ ಹೇಳಿದರು.
ಕರ್ನಾಟಕ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದೆ. ಶಿಕ್ಷಣಕ್ಕಾಗಿಯೇ 12 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ ಎಂದರು. ಸರ್ಕಾರದ ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಕಡಿಮೆ ಎನಿಸಿದರೂ ಮಠಮಾನ್ಯಗಳು ಶಿಕ್ಷಣದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಆದಿಚುಂಚನಗಿರಿ ಸಂಸ್ಥೆ ಹಳೆ ಮೈಸೂರು ಭಾಗದಲ್ಲಿ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸೇವೆ ಅದ್ವಿತೀಯವಾದುದು. ವೈದ್ಯಕೀಯ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆದಿಚುಂಚನಗಿರಿ ಮಠದ ಸೇವೆ ಹೆಚ್ಚಿದೆ ಎಂದರು.
ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಚುರುಕುಮುಟ್ಟಿಸುವ ಕೆಲಸದಲ್ಲಿ ನಿರತರಾಗಿರುವುದಾಗಿ ಹೇಳಿದರು. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ (ಸೆ.3) ಒಂದು ತಿಂಗಳಾಗಿದೆ. ಆದರೆ ಕೊಪ್ಪಳ ವಿಧಾನಸಭೆ ಉಪ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡಿಲ್ಲ. ಈಗಾಗಲೇ ಉಪಚುನಾವಣೆ ತಯಾರಿ ನಡೆಸಿರುವ ಬಿಜೆಪಿಯಲ್ಲಿ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಗೆಲ್ಲುವ ತಂತ್ರ ಒಂದು ಗುಂಪು ರೂಪಿಸುತ್ತಿದೆ. ಮತ್ತೊಂದೆಡೆ ಈಶ್ವರಪ್ಪ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಎಲ್ಲರ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.
ಆದರೆ ಬಿಜೆಪಿಯೊಳಗೆ ಕೊಪ್ಪಳ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಬೆಂಬಲಿಗರ ನಡುವೆ ಅಸಮಾಧಾನ ಹೊಗೆ ಹೊರಹೊಮ್ಮತೊಡಗಿದೆ. ಅಲ್ಲದೇ ಶ್ರೀರಾಮುಲು ಜೆಡಿಎಸ್ ಸೇರುವ ಕುರಿತು ಸುದ್ದಿಗಾರರು ಈ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಅವರು, ಈ ಮಾತನ್ನು ಯಾರು ಹೇಳಿದ್ದಾರೋ ಅವರಲ್ಲೇ ನೀವು ಉತ್ತರ ನೀಡಬೇಕೆಂದು ತಿರುಗೇಟು ನೀಡಿದರು.
ಒಟ್ಟಾರೆ ತಾನು ಮತ್ತೆ ಆರು ತಿಂಗಳ ಬಳಿಕ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತೇನೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಒಂದೆಡೆಯಾದರೆ, ಮತ್ತೊಂದೆಡೆ ಇತ್ತೀಚೆಗೆ ಸಚಿವ ಉಮೇಶ್ ಕತ್ತಿ ಕೂಡ, ಕಾದು ನೋಡಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗ್ತಾರೆ ಎಂದು ಪುನರುಚ್ಚರಿಸಿದ್ದರು. ಈ ಎಲ್ಲಾ ಬೆಳವಣಿಗೆ ಹಿಂದೆ ಏನೋ ಮಸಲತ್ತು ನಡೆಯುತ್ತಿದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.