ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಭಿನ್ನಮತ: ಗೆಲ್ಲಲು ಯಡಿಯೂರಪ್ಪ ಬೇಕು, ಸದಾನಂದ ಗೌಡ ಅಲ್ಲ (BJP | Yeddyurappa | Sadananda Gowda | Ishwarappa | Chandre gowda | Latest News in Kannada | Kannada News | Karnataka News | Latest Karnataka News |)
ಭಿನ್ನಮತ: ಗೆಲ್ಲಲು ಯಡಿಯೂರಪ್ಪ ಬೇಕು, ಸದಾನಂದ ಗೌಡ ಅಲ್ಲ
ಬೆಂಗಳೂರು, ಶನಿವಾರ, 3 ಸೆಪ್ಟೆಂಬರ್ 2011( 16:25 IST )
PR
ಕೊಪ್ಪಳ ವಿಧಾನಸಭೆ ಉಪಚುನಾವಣೆ ಆಡಳಿತಾರೂಢ ಬಿಜೆಪಿಯೊಳಗೆ ಮತ್ತೊಂದು ಸುತ್ತಿನ ಭಿನ್ನಮತಕ್ಕೆ ಎಡೆಮಾಡಿಕೊಡುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ. ಅದಕ್ಕೆ ಕಾರಣ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಮತ್ತೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂಬ ಭಿನ್ನ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಯಡಿಯೂರಪ್ಪ ನಿವಾಸದಲ್ಲಿ ತುರ್ತು ಸಭೆ ನಡೆದಿತ್ತು. ಇದರಲ್ಲಿ ಆಪ್ತ ಸಚಿವರು, ಶಾಸಕರು, ಸಂಸದರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿ.ಬಿ.ಚಂದ್ರೇಗೌಡ, ಕೊಪ್ಪಳ ಚುನಾವಣೆಯನ್ನು ಯಡಿಯೂರಪ್ಪ ನಾಯಕತ್ವದಲ್ಲಿಯೇ ಎದುರಿಸಬೇಕು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ನಾಯಕತ್ವದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಏತನ್ಮಧ್ಯೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಚುನಾವಣೆಯಲ್ಲಿ ಗೆಲ್ಲಲು ನಾವು ಎಲ್ಲ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ಯಡಿಯೂರಪ್ಪ ನಾಯಕತ್ವ ಮಾತ್ರ ಎಂಬ ಪ್ರಶ್ನೆ ಇಲ್ಲ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿ ಎಲ್ಲರೂ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
PR
ಸೆಪ್ಟೆಂಬರ್ 9ರಂದು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಅಲ್ಲದೇ ಶ್ರೀರಾಮುಲು ಯಾವುದೇ ಕಾರಣಕ್ಕೂ ಬಿಜೆಪಿ ತ್ಯಜಿಸುವುದಿಲ್ಲ. ನಾನೇ ಖುದ್ದಾಗಿ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರ ಜತೆ ಇಂದು ದೂರವಾಣಿ ಮೂಲಕ ಮಾತನಾಡಿರುವುದಾಗಿ ಸಮಜಾಯಿಷಿ ನೀಡಿದರು.
ಡಾಲರ್ಸ್ ಕಾಲೋನಿಯಲ್ಲಿ ಇರುವ ಯಡಿಯೂರಪ್ಪ ಅವರ ನಿವಾಸ ಧವಳಗಿರಿಯಲ್ಲಿ ಅವರ ಆಪ್ತರಾದ ಡಿಬಿ ಚಂದ್ರೇಗೌಡ, ವಿ.ಎಸ್.ಆಚಾರ್ಯ, ಮುರುಗೇಶ್ ನಿರಾಣಿ, ಸೋಮಣ್ಣ, ರಾಜೂಗೌಡ, ರೇಣುಕಾಚಾರ್ಯ ಮುಂತಾದವರ ಜತೆ ಕೊಪ್ಪಳ ಚುನಾವಣೆ ಕುರಿತು ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ತಂತ್ರವನ್ನು ಯಡಿಯೂರಪ್ಪ ಪಡೆ ನಡೆಸುತ್ತಿದೆ.