ಅಧಿಕಾರದ ಕುರ್ಚಿಗೆ ತಾನು ಅಂಟಿಕೊಂಡಿಲ್ಲ ಎಂದು ಹೇಳಿಕೆ ನೀಡುತ್ತಲೇ ಇದ್ದ ರೆಡ್ಡಿ ಬ್ರದರ್ಸ್ ಆಪ್ತ ಮಿತ್ರ, ಮಾಜಿ ಸಚಿವ ಶ್ರೀರಾಮಲು ಇದೀಗ ದಿಢೀರ್ ಬಂಡಾಯದ ಬಾವುಟ ಹಾರಿಸಿದ್ದು, ಬಹುತೇಕ ಭಾನುವಾರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ. ಅಲ್ಲದೇ ಕೊಪ್ಪಳ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಶನಿವಾರ ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ, ಹೂವಿನಹಡಗಲಿ ಶಾಸಕ ಚಂದ್ರ ನಾಯಕ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ, ಸ್ಥಳೀಯ ಸಂಸ್ಥೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಚಿವ ಸ್ಥಾನ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಶ್ರೀರಾಮುಲು ನಾಳೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಸಭೆಯಲ್ಲಿ ಚಿಂತನೆ ನಡೆಸಿದ್ದಾರೆ. ರಾಜೀನಾಮೆ ನಂತರ ಅವರು ಕೊಪ್ಪಳ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಶ್ರೀರಾಮಲು ಬಿಜೆಪಿ ತೊರೆಯುತ್ತಾರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ...ಹೀಗೆ ಹಲವಾರು ಊಹಾಪೋಹಗಳು ಎದ್ದಿವೆ. ಇವೆಲ್ಲದಕ್ಕೂ ಭಾನುವಾರ 11ಗಂಟೆಗೆ ಶ್ರೀರಾಮುಲು ಅವರು ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಊಹಾಪೋಹಕ್ಕೂ ಉತ್ತರ ನೀಡಲಿದ್ದಾರೆ ಎಂದು ರೆಡ್ಡಿ ಸಹೋದರರು ಆಪ್ತ ಮೂಲಗಳು ವಿವರಿಸಿವೆ.
ಈಗಾಗಲೇ ಶ್ರೀರಾಮುಲು ಅವರು ಜೆಡಿಎಸ್ ಸೇರುತ್ತಾರೆಂಬ ವದಂತಿ ಇತ್ತು. ಆದರೆ ಶ್ರೀರಾಮುಲು ಕೂಡ ಆ ವದಂತಿಯನ್ನು ತಳ್ಳಿಹಾಕಿದ್ದರು. ಅದೇ ರೀತಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಪಕ್ಷದ ವಕ್ತಾರ ವೈಎಸ್‌ವಿ ದತ್ತಾ ಕೂಡ ಶ್ರೀರಾಮುಲು ಜೆಡಿಎಸ್ ಸೇರ್ಪಡೆ ಬರೇ ವದಂತಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಏತನ್ಮಧ್ಯೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೇರಲು ತಮ್ಮ ಶ್ರಮ ಅಪಾರವಾದದ್ದು. ಆದರೆ ಇದೀಗ ಗಣಿ ವರದಿ ಹೆಸರಿನಲ್ಲಿ ಮೂಲೆಗುಂಪು ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ನೂತನ ಪ್ರಾದೇಶಿಕ ಪಕ್ಷ ಕಟ್ಟುವ ತಂತ್ರ ಹೆಣೆದಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಒಟ್ಟಾರೆ ಅಧಿಕಾರದ ಗದ್ದುಗೆಗಾಗಿ ಹರಸಾಹಸ ನಡೆಸುತ್ತಿರುವ ಶ್ರೀರಾಮುಲು, ರೆಡ್ಡಿ ಸಹೋದರರ ನಡೆ ಏನು ಎಂಬುದಕ್ಕೆ ಭಾನುವಾರ ಉತ್ತರ ದೊರೆಯಲಿದೆ.