ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ಬಂಧಿಸಿರುವ ಕ್ರಮವನ್ನು ಖಂಡಿಸಿ ನಗರದ ವಿವಿಧೆಡೆ ರೆಡ್ಡಿ ಪರ ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದಿದು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ನಿವಾಸದ ಮೇಲಿನ ದಾಳಿ ಹಾಗೂ ಬಂಧನ ಕಾಂಗ್ರೆಸ್ ಕೃಪಾಪೋಷಿತವಾಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ಪ್ರತಿಕೃತಿಯನ್ನು ದಹಿಸುವ ಮೂಲಕ ತಮ್ಮ ಸಿಟ್ಟನ್ನು ಪ್ರದರ್ಶಿಸಿದರು.
ಬಳ್ಳಾರಿಯ ಕೌಲ್ ಬಜಾರ್, ಎಸ್.ಪಿ. ಸರ್ಕಲ್‌ನಲ್ಲಿ ಜಮಾಯಿಸಿರುವ ಸಾವಿರಾರು ಮಂದಿ ರೆಡ್ಡಿ ಪರ ಬೆಂಬಲಿಗರು ತಮ್ಮ ನಾಯಕನ ಪರ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ದುರುದ್ದೇಶದಿಂದ ನಮ್ಮ ನಾಯಕರ ಮನೆ ಮೇಲೆ ದಾಳಿ ನಡೆಸಿ ಸೇಡಿನ ರಾಜಕಾರಣ ನಡೆಸುತ್ತಿರುವುದಾಗಿ ವಾಗ್ದಾಳಿ ನಡೆಸಿದರು.
ಜನಾರ್ದನ ರೆಡ್ಡಿ ಬಂಧನ ಖಂಡಿಸಿ ಸಾವಿರಾರು ಮಂದಿ ಬಳ್ಳಾರಿಯ ವಿವಿಧೆಡೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೂ ಸಾಕಷ್ಟು ಅಡ್ಡಿಯುಂಟಾಗಿದೆ. ಪರಿಸ್ಥಿತಿ ಉದ್ನಿಗ್ನವಾಗಿರುವ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಕೂಡ ಹರಸಾಹಸ ಪಡುತ್ತಿದ್ದಾರೆ.