ಅದೃಷ್ಟ ಕೈಕೊಟ್ಟಾಗ ಶನಿ ಹೆಗಲೇರುತ್ತಾನೆ ಎಂಬಂತೆ ಸಿಬಿಐ ದಾಳಿ ನಡೆಯುತ್ತದೆ ಎಂಬ ಮುನ್ಸೂಚನೆ ಅರಿತ ಬಳ್ಳಾರಿ ಗಣಿಧಣಿ ವಿದೇಶಕ್ಕೆ ಎಸ್ಕೇಪ್ ಆಗುವ ಯೋಜನೆ ಹಾಕಿದ್ದರು. ಆದರೆ ಸಿಬಿಐ ಸೋಮವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸುವ ಮೂಲಕ ಜನಾರ್ದನ ರೆಡ್ಡಿ ಲೆಕ್ಕಚಾರ ತಲೆಕೆಳಗಾಗಿದ್ದು, ಜೈಲಿನಲ್ಲಿ ಕಾಲಕಳೆಯುವಂತಾಗಿದೆ.
ಓಬಳಾಪುರಂ ಮೈನಿಂಗ್ ಕಂಪನಿ ಎಸಗಿರುವ ಅಕ್ರಮಗಳ ಬಗ್ಗೆ ಸಿಬಿಐ ಅಧಿಕಾರಿಗಳು ಬೆನ್ನಹಿಂದೆ ಬಿದ್ದಿದ್ದಾರೆ ಎಂಬ ಸುಳಿವು ಪಡೆದಿದ್ದ ಜನಾರ್ದನ ರೆಡ್ಡಿ ಇಂಡೋನೇಷ್ಯಾಕ್ಕೆ ತೆರಳಲು ತಯಾರಾಗಿದ್ದರು. ಅಲ್ಲದೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರೂ, ತಾನು ಸಿಗಬಾರದು, ಮಾಧ್ಯಮಗಳಿಗೂ ಈ ಸುದ್ದಿ ತಿಳಿಯಬಾರದು ಎಂಬ ಮಾಸ್ಟರ್ ಪ್ಲಾನ್ ಮಾಡಿ ಶ್ರೀರಾಮುಲು ರಾಜೀನಾಮೆ ಪ್ರಹಸನಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಅವೆಲ್ಲ ಈಗ ಲೆಕ್ಕಚಾರ ಉಲ್ಟಾಪಲ್ಟಾ ಆಗಿದೆ.
ಶ್ರೀರಾಮುಲು ರಾಜೀನಾಮೆ ನಿಟ್ಟಿನಲ್ಲಿ ಸೋಮವಾರ ದೆಹಲಿಯ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಇಂಡೋನೇಷ್ಯಾಕ್ಕೆ ಹೊರಡಲು ಸಿದ್ದತೆ ನಡೆಸಿದ್ದರು ಎನ್ನಲಾಗಿದೆ. ಭಾನುವಾರ ಬೆಂಗಳೂರಿನಲ್ಲಿಯೇ ಇರಬೇಕಿದ್ದ ರೆಡ್ಡಿ, ಶ್ರೀರಾಮುಲು ನಾಟಕದಿಂದ ಬೇಸತ್ತ ನಗರ ಪಾಲಿಕೆ ಸದಸ್ಯರು ರಾಜೀನಾಮೆ ನೀಡುವ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಬಳ್ಳಾರಿಗೆ ವಾಪಸ್ ಆಗಿದ್ದರು.
ಸಿಬಿಐ ದಾಳಿ ಹಾಗೂ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರುವ ಯೋಜನೆಯನ್ನು ರೆಡ್ಡಿ ಸೋಮವಾರ ಸಂಜೆಗೆ ಮುಂದೂಡಿದ್ದರು. ಆದರೆ ಸೋಮವಾರ ಬೆಳಗ್ಗೆ ಬಂಧನಕ್ಕೆ ಒಳಗಾಗುವ ಮೂಲಕ ರೆಡ್ಡಿ ಪಾಳಯ ಆಘಾತಕ್ಕೊಳಗಾಗಿದೆ.