ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ರಾತ್ರಿ ಬಿಸ್ಕೆಟ್, ಬೆಳಗ್ಗೆ ಕಿಚಡಿ ಇದು ರೆಡ್ಡಿ ಜೈಲು ದಿನಚರಿ
(janardhan reddy | Illegal mining | CBI | Latest News in Kannada | Kannada News | Karnataka News | Latest Karnataka News | Bangalore)
ರಾತ್ರಿ ಬಿಸ್ಕೆಟ್, ಬೆಳಗ್ಗೆ ಕಿಚಡಿ ಇದು ರೆಡ್ಡಿ ಜೈಲು ದಿನಚರಿ
ಹೈದರಾಬಾದ್, ಮಂಗಳವಾರ, 6 ಸೆಪ್ಟೆಂಬರ್ 2011( 13:24 IST )
WD
ಸಂಚಾರಕ್ಕೆ ಹೆಲಿಕಾಪ್ಟರ್, ಐಶಾರಾಮಿ ಕಾರು, ಉಳಿಯಲು ಭವ್ಯ ಬಂಗಲೆ ಹೈಫೈ ಜೀವನ ನಡೆಸುತ್ತಿದ್ದ ಬಳ್ಳಾರಿ ಗಣಿಧಣಿ ಮಾಜಿ ಸಚಿವ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿಯ ಮಾಲೀಕ ಗಾಲಿ ಜನಾರ್ದನ ರೆಡ್ಡಿ ತಾವು ಇಷ್ಟು ಶೀಘ್ರ ಜೈಲು ಕಂಬಿ ಹಿಂದೆ ಹೋಗುವ ಬಗ್ಗೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇದೀಗ ಅದಿರು ಲೂಟಿ, ಗಡಿನಾಶ ಆರೋಪದಲ್ಲಿ ಬಂಧಿಯಾಗಿರುವ ರೆಡ್ಡಿ ರಾತ್ರಿ ಬಿಸ್ಕೆಟ್, ಬೆಳಗ್ಗೆ ಕಿಚಡಿ ಸೇವನೆ ಮಾಡುವ ಮೂಲಕ ಜೈಲು ದಿನಚರಿ ಆರಂಭವಾಗಿದೆ.
ನಾಲ್ಕು ದಿನಗಳ ಹಿಂದೆ ಅರಸರಂತಿದ್ದ ಜನಾರ್ದನ ರೆಡ್ಡಿ ಹಾಗೂ ಓಎಂಸಿ ಆಡಳಿತ ನಿರ್ದೇಶಕ ಶ್ರೀನಿವಾಸ ರೆಡ್ಡಿ ಈಗ ಹೈದರಾಬಾದ್‌ನ ಚಂಚಲಗುಡ ಜೈಲಿನ ಸಿ ಕ್ಲಾಸ್ ಸೆಲ್‌ನಲ್ಲಿರುವ ಸಾಮಾನ್ಯ ಕೈದಿಗಳು.
ರೆಡ್ಡಿ ಅವರಿಗೆ ಮಲಗಲು ಚಾಪೆ ಮತ್ತು ದಿಂಬು ನೀಡಲಾಗಿದ್ದು, ಜೈಲಿನ ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ನೀಡಲಾಗುತ್ತದೆ ಎಂದು ಜೈಲಿನ ಅಧೀಕ್ಷಕ ಕೇಶವ ರೆಡ್ಡಿ ತಿಳಿಸಿದ್ದಾರೆ.
ವಿಶೇಷ ಸೌಲಭ್ಯ, ಇಂಗ್ಲಿಷ್ ಪೇಪರ್ ನಿರಾಕರಣೆ ಜನಾರ್ದನ ರೆಡ್ಡಿ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡುವಂತೆ ಕೋರ್ಟ್ ಸೂಚನೆ ನೀಡದ ಕಾರಣ ಸಿ ದರ್ಜೆ ಸೆಲ್‌ನಲ್ಲಿರುವ ಇತರೆ 17 ಕೈದಿಗಳೊಂದಿಗೆ ಅವರನ್ನೂ ಇರಿಸಲಾಗಿದೆ ಎಂದು ತಿಳಿಸಿರುವ ಜೈಲಿನ ಅಧೀಕ್ಷಕರು, ಬಂಧಿತರಿಗೆ ಬ್ಲಾಕ್ ಅಂಡ್ ವೈಟ್ ಟಿವಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಇಂಗ್ಲಿಷ್ ಪೇಪರ್ ನೀಡುವಂತೆ ರೆಡ್ಡಿ ಅವರು ಸಲ್ಲಿಸಿದ್ದ ಕೋರಿಕೆಯನ್ನೂ ಜೈಲಿನ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ರಾತ್ರಿ ಬಿಸ್ಕೆಟ್, ಬೆಳಗ್ಗೆ ಕಿಚಡಿ ರಾತ್ರಿ ಜೈಲಿನ ಊಟ ತಿರಸ್ಕರಿಸಿ ಕೇವಲ ಬಿಸ್ಕೆಟ್ ಸೇವಿಸಿ ಚಾಪೆಯ ಮೇಲೆಯೇ ಮಲಗಿದ್ದ ಜನಾರ್ದನ ರೆಡ್ಡಿ ಅವರು ಬೆಳಗ್ಗೆ ಇತರೆ ಕೈದಿಗಳೊಂದಿಗೆ ಕಿಚಡಿ ಸೇವಿಸಿದ್ದಾರೆ. ಮಧ್ಯಾಹ್ನದ ಊಟಕ್ಕೆ 600 ಗ್ರಾಂ ಅನ್ನ, 100 ಗ್ರಾಂ ಸಾರು ಹಾಗೂ 250 ಗ್ರಾಂ ತರಕಾರಿ ಪದಾರ್ಥ ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಕೈದಿ ನಂ. 697 ಚಂಚಲಗುಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಕೈದಿ ನಂಬರ್ 697 ಹಾಗೂ ಅವರ ಸಂಬಂಧಿ ಶ್ರೀನಿವಾದ ರೆಡ್ಡಿಗೆ ಕೈದಿ ನಂಬರ್ 696 ನೀಡಲಾಗಿದೆ.
ಸತ್ಯಂ ಐಟಿ ಕಂಪನಿಯಲ್ಲಿ ನಡೆಸಿದ ಬಹು ಕೋಟಿ ಹಗರಣದ ಆಪಾದನೆಯ ಮೇರೆಗೆ ಬಂಧಿತರಾಗಿ ಚಂಚಲಗುಡ ಜೈಲಿನಲ್ಲಿರುವ ಸತ್ಯಂ ಐಟಿ ಕಂಪನಿಯ ಸಿಇಒ ರಾಮಲಿಂಗರಾಜು ಅವರಿಗೆ ವಿಶೇಷ ಖೈದಿಯ ಸ್ಥಾನ ನೀಡಲಾಗಿದ್ದು,ಎಲ್ಲ ಸೌಲಭ್ಯವನ್ನೂ ಕಲ್ಪಿಸಲಾಗಿದೆ.