ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » 'ತಿರುಮಲ ತಿಮ್ಮಪ್ಪನಿಗೆ ರೆಡ್ಡಿ ಕೊಟ್ಟ ವಜ್ರ ಕಿರೀಟ ವಾಪಸ್ ಕೊಡಿ' (Janardana Reddy | CBI | Illegal Mining | Bellary | Thirumala | Latest News in Kannada | Kannada News | Karnataka News | Latest Karnataka News | Bangal)
'ತಿರುಮಲ ತಿಮ್ಮಪ್ಪನಿಗೆ ರೆಡ್ಡಿ ಕೊಟ್ಟ ವಜ್ರ ಕಿರೀಟ ವಾಪಸ್ ಕೊಡಿ'
ಹೈದರಾಬಾದ್, ಮಂಗಳವಾರ, 6 ಸೆಪ್ಟೆಂಬರ್ 2011( 15:36 IST )
WD
ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಸಚಿವರಾಗಿ ಮೆರೆದಾಡಿ ಮಾಜಿಯಾದ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲುಪಾಲಾದ ಬೆನ್ನಲ್ಲೇ, ಜನಾರ್ದನ ರೆಡ್ಡಿ ತಿರುಪತಿ ತಿಮ್ಮಪ್ಪನಿಗೆ ನೀಡಿದ 45 ಕೋಟಿ ರೂಪಾಯಿಯ ವಜ್ರ ಖಚಿತ ಕಿರೀಟವನ್ನು ವಾಪಸ್ ಕೊಡುವಂತೆ ತಿರುಮಲದಲ್ಲಿ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಳಂಕಿತ ವ್ಯಕ್ತಿಯಿಂದ ಈ ರೀತಿ ಕಾಣಿಕೆ ಪಡೆದರೆ ತಿಮ್ಮಪ್ಪನನ್ನು ಅಪವಿತ್ರಗೊಳಿಸಿದಂತಾಗುತ್ತದೆ ಎಂದು ಆರೋಪಿಸಿರುವ ತಿರುಮಲ ಭಕ್ತರು, ಆ ನಿಟ್ಟಿನಲ್ಲಿ ಜನಾರ್ದನ ರೆಡ್ಡಿ ತಿಮ್ಮಪ್ಪಿನಿಗೆ ಕಾಣಿಕೆ ನೀಡಿರುವ ವಜ್ರ ಖಚಿತ ಕಿರೀಟವನ್ನು ವಾಪಸ್ ಮಾಡುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ನೆರೆದಿರುವ ಭಕ್ತರು ಜನಾರ್ದನ ರೆಡ್ಡಿ ವಿರುದ್ಧ ಘೋಷಣೆ ಕೂಗಿ, ಕಳಂಕಿತರ ಕಾಣಿಕೆ ದೇವರಿಗೆ ಬೇಡ. ಕಳಂಕಿತರು ಕೊಟ್ಟಿರುವ ಕಾಣಿಕೆ ದೇವರಿಗೆ ಹಾಕಿದರೆ ದೇವರಿಗೆ ಮೈಲಿಗೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2009 ಜೂನ್ ತಿಂಗಳಿನಲ್ಲಿ ಜನಾರ್ದನ ರೆಡ್ಡಿಯವರು 30 ಕೆಜಿ ತೂಕದ ಸುಮಾರು 45 ಕೋಟಿ ರೂಪಾಯಿಯ ವಜ್ರ ಖಚಿತ ಕಿರೀಟವನ್ನು ತಿರುಮಲ ಶ್ರೀವೆಂಕಟೇಶ್ವರನಿಗೆ ಅರ್ಪಿಸಿದ್ದರು.
45 ಕೋಟಿ ರೂಪಾಯಿ ವೆಚ್ಚದಲ್ಲಿ ವಜ್ರ, ಹವಳ, ಮುತ್ತುಗಳಿಂದ ನಿರ್ಮಿಸಿದ್ದ ಕಿರೀಟವನ್ನು ಪತ್ನಿ ಅರುಣಾ ಲಕ್ಷ್ಮಿ ಹಾಗೂ ಮಿತ್ರ ಶ್ರೀರಾಮುಲು ಜತೆಗೂಡಿ ತಿಮ್ಮಪ್ಪನಿಗೆ ನೀಡಿದ್ದರು.
ಇದೀಗ ಸೋಮವಾರ ಅಕ್ರಮ ಗಣಿಗಾರಿಕೆ, ಗಡಿನಾಶ ಆರೋಪದಲ್ಲಿ ಸಿಬಿಐ ಜನಾರ್ದನ ರೆಡ್ಡಿಯವರನ್ನು ಬಂಧಿಸಿತ್ತು. ಇದೀಗ ಹೈದರಾಬಾದ್‌ನ ಚಂಚಲಗುಡ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕಳಂಕಿತ ವ್ಯಕ್ತಿ ನೀಡಿರುವ ಕಾಣಿಕೆಯನ್ನು ತಿರುಮಲ ಆಡಳಿತ ಮಂಡಳಿ ವಾಪಸ್ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.