ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಮತ್ತಷ್ಟು ಸಂಕಷ್ಟ: ಕುಮಾರಸ್ವಾಮಿ ದಂಪತಿಗೆ ವಾರಂಟ್ ಭೀತಿ (Kumaraswamy | Anitha kumaraswamy | Illegal Mining | Lokayukta | High court| Kannada News | Karnataka News | Latest Karnataka News | Bangalore | Bangal)
ಮತ್ತಷ್ಟು ಸಂಕಷ್ಟ: ಕುಮಾರಸ್ವಾಮಿ ದಂಪತಿಗೆ ವಾರಂಟ್ ಭೀತಿ
ಬೆಂಗಳೂರು, ಮಂಗಳವಾರ, 6 ಸೆಪ್ಟೆಂಬರ್ 2011( 18:19 IST )
PR
ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಟಕಟೆ ಏರುವುದನ್ನು ತಪ್ಪಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾಕುಮಾರಸ್ವಾಮಿ ಮಾಡಿದ್ದ ಕೊನೆಯ ಪ್ರಯತ್ನವೂ ಕೈಕೊಟ್ಟಿದೆ.
ನಿರೀಕ್ಷಣಾ ಜಾಮೀನು ನೀಡುವಂತೆ ಕುಮಾರಸ್ವಾಮಿ ದಂಪತಿಗಳು ಮಂಗಳವಾರ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ನಾರಾಯಣಸ್ವಾಮಿ ಅವರ ಏಕಸದಸ್ಯ ಪೀಠ ಈ ಕುರಿತು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಏತನ್ಮಧ್ಯೆ, ತಮ್ಮ ಕಕ್ಷಿದಾರರು ಬುಧವಾರವೇ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು ಆ ನಿಟ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಕುಮಾರಸ್ವಾಮಿ ಪರ ವಕೀಲರು ಮನವಿ ಮಾಡಿಕೊಂಡಾಗ, ನ್ಯಾಯ ಎಲ್ಲರಿಗೂ ಒಂದೇ, ರಾಜಕಾರಣಿ ಎಂದ ಕೂಡಲೇ ಅವರ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು.
ಆ ನಿಟ್ಟಿನಲ್ಲಿ ಕುಮಾರಸ್ವಾಮಿ ದಂಪತಿಗಳು ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲೇಬೇಕೆಂದು ಲೋಕಾಯುಕ್ತ ನ್ಯಾಯಾಧೀಶರು ಕಟ್ಟಾಜ್ಞೆ ನೀಡಿರುವ ನಿಟ್ಟಿನಲ್ಲಿ ಇಬ್ಬರೂ ಕಟಕಟೆಯಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.
ಜಂತಕಲ್ ಮೈನಿಂಗ್ ಕಂಪನಿ ಗುತ್ತಿಗೆ ನೀಡಿಕೆ ಹಾಗೂ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಗೆ ಸಗಟು ನಿವೇಶನ ಮಂಜೂರು ಮಾಡುವಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ವಕೀಲ ವಿನೋದ್ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಕಳೆದ ಆ.30ರಂದು ಕುಮಾರಸ್ವಾಮಿ ದಂಪತಿಗೆ ಸಮನ್ಸ್ ನೀಡಿದ್ದರು.
ಆದರೆ ಅನಾರೋಗ್ಯದ ನೆಪವೊಡ್ಡಿ, ಕಳೆದ 7 ದಿನಗಳಿಂದ ನ್ಯಾಯಾಲಯದ ಮುಂದೆ ಹಾಜರಾಗದೇ, ನ್ಯಾಯಾಧೀಶರ ಆಕ್ರೋಶಕ್ಕೆ ಗುರಿಯಾಗಿದ್ದರು. ಕೊನೆಯ ಪ್ರಯತ್ನ ಎಂಬಂತೆ ಇಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೂ ತಕ್ಷಣ ಪರಿಹಾರ ದೊರಕಿಲ್ಲ. ಇಕ್ಕಟ್ಟಿನಲ್ಲಿ ಸಿಲುಕಿರುವ ಕುಮಾರಸ್ವಾಮಿ ಒಂದು ವೇಳೆ ಹೈಕೋರ್ಟ್ ಆದೇಶಕ್ಕಾಗಿ ಕಾಯುತ್ತಾ ಕುಳಿತರೆ ಲೋಕಾಯುಕ್ತ ನ್ಯಾಯಾಲಯದಿಂದ ವಾರಂಟ್ ಜಾರಿಯಾಗುವ ಸಾಧ್ಯತೆಯೂ ಇದೆ. ಒಟ್ಟಾರೆ ನಾಳೆಯ ಬೆಳವಣಿಗೆ ಕುತೂಲಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಎಸ್ ವೈ ಕೂಡ ಬುಧವಾರ ಕೋರ್ಟ್‌ಗೆ ಹಾಜರ್: ಭೂ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಬುಧವಾರ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಅವರೂ ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯಲಿದೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಬುಧವಾರ ಲೋಕಾಯುಕ್ತ ಕೋರ್ಟ್ ಕಟಕಟೆ ಏರಲಿದ್ದಾರೆ.