ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಭೂ ಹಗರಣ: ಬಿ.ಎಸ್.ಯಡಿಯೂರಪ್ಪ ಸೆ.13ರ ತನಕ ಸೇಫ್ (Yeddyurappa | Land Scam | Lokayukta court | Latest News in Kannada | Bangalore News,)
ಭೂ ಹಗರಣ: ಬಿ.ಎಸ್.ಯಡಿಯೂರಪ್ಪ ಸೆ.13ರ ತನಕ ಸೇಫ್
ಬೆಂಗಳೂರು, ಬುಧವಾರ, 7 ಸೆಪ್ಟೆಂಬರ್ 2011( 16:34 IST )
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಡಿ ನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 13ಕ್ಕೆ ಮುಂದೂಡುವ ಮೂಲಕ ಬಿಎಸ್‌ವೈಗೆ ಕೆಲವು ದಿನಗಳ ರಿಲೀಫ್ ಸಿಕ್ಕಂತಾಗಿದೆ.
ಬುಧವಾರ ಮಧ್ಯಾಹ್ನ 3-10ರ ಸುಮಾರಿಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬ ಸದಸ್ಯರ ಸಮೇತ ಹಾಜರಾದರು.
ವಿಚಾರಣೆ ಸಂದರ್ಭದಲ್ಲಿ, ಬಿ.ಎಸ್.ಯಡಿಯೂರಪ್ಪನವರ ಪ್ರಕರಣವನ್ನು ಪ್ರತೀ ಶನಿವಾರದಂದೇ ನಡೆಸುವಂತೆ ವಕೀಲ ರವಿ ನಾಯ್ಕ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಸಿರಾಜಿನ್ ಭಾಷಾ ಪರ ವಕೀಲರಾದ ಸಿ.ಎಚ್.ಹನುಮಂತರಾಯರ ವಕಾಲತ್ತಿಗೆ ಆಕ್ಷೇಪಣೆ ಸಲ್ಲಿಸಿದರು.
ವಕೀಲ ಸಿರಾಜಿನ್ ಪರ ಯಾರು ವಕಾಲತ್ತು ವಹಿಸಬೇಕು ಎಂಬ ವಿಚಾರ ಮೊದಲು ಇತ್ಯರ್ಥವಾಗಬೇಕೆಂದು ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 13ರ ಮಧ್ಯಾಹ್ನ 3ಗಂಟೆಗೆ ಮುಂದೂಡಿದರು. ಅಲ್ಲದೇ ಈ ಬಗ್ಗೆ ವಾದ ಮಂಡಿಸುವಂತೆ ಸಿರಾಜಿನ್ ಪರ ವಕೀಲ ಸಿ.ಎಚ್.ಹನುಮಂತರಾಯ ಅವರಿಗೆ ನ್ಯಾಯಮೂರ್ತಿ ಸುಧೀಂದ್ರ ರಾವ್ ಸೂಚಿಸಿದರು.
ಭೂಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹಾಕಿರುವ ಎಫ್ಐಆರ್ ರದ್ದುಗೊಳಿಸಿ, ಶಿಕ್ಷೆಯಿಂದ ಬಚಾವ್ ಮಾಡಬೇಕೆಂದು ಕೋರಿ ಯಡಿಯೂರಪ್ಪನವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ನಾಲ್ಕು ಅರ್ಜಿಗಳ ಪೈಕಿ ಈಗಾಗಲೇ ಎರಡು ಅರ್ಜಿ ವಜಾಗೊಂಡಿದೆ. ಯಡಿಯೂರಪ್ಪ ಭಾರತೀಯ ದಂಡ ಸಂಹಿತೆ 420, 419, 447, 123 ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
ಬಿಎಸ್‌ವೈ ಪರ-ವಿರೋಧ ಘೋಷಣೆ: ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ಅಂತ್ಯಗೊಂಡ ನಂತರ ಬಿ.ಎಸ್.ಯಡಿಯೂರಪ್ಪ ಹೊರಬಂದ ಸಂದರ್ಭದಲ್ಲಿ ನಾಟಕೀಯ ಬೆಳವಣಿಗೆ ಎಂಬಂತೆ ವಕೀಲರ ಗುಂಪೊಂದು ಬಿಎಸ್‌ವೈ ಪರ ಘೋಷಣೆ ಕೂಗಿದ್ದು, ಮತ್ತೊಂದು ವಕೀಲರ ಗುಂಪು ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿತ್ತು. ಯಡಿಯೂರಪ್ಪನವರಿಗೆ ಸಚಿವ ರೇಣುಕಾಚಾರ್ಯ, ಮಾಜಿ ಸಚಿವ ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಸಾಥ್ ನೀಡಿದ್ದರು.