ಕಳೆದ ನಾಲ್ಕು ದಿನಗಳಿಂದ ಜನಾರ್ದನ ರೆಡ್ಡಿಯ ನಿವಾಸದಲ್ಲಿ ಜನಸಂದಣಿ ಇಲ್ಲದೆ ಮೌನ ಆವರಿಸಿದೆ. ಪತ್ನಿ ಲಕ್ಷ್ಮಿ ಅರುಣಾ, ಪುತ್ರ, ಪುತ್ರಿಗೆ ಸಹೋದರ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಆಪ್ತಮಿತ್ರ ಶ್ರೀರಾಮುಲು ಧೈರ್ಯ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ.
ಅಷ್ಟೇ ಅಲ್ಲದೇ ಚಂಚಲಗುಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯನ್ನು ಜಾಮೀನಿನ ಮೇಲೆ ಹೊರ ಕರೆತರುವ ನಿಟ್ಟಿನಲ್ಲಿ ಖ್ಯಾತ ವಕೀಲರು, ಕಾನೂನು ತಜ್ಞರ ಜತೆ ಶ್ರೀರಾಮುಲು, ಕರುಣಾಕರ ರೆಡ್ಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ, ಓಬಳಾಪುರಂ ಗಣಿ ಕಂಪನಿ ಮಾಲೀಕ ಜನಾರ್ದನ ರೆಡ್ಡಿ ನಿವಾಸ ಕುಟೀರ ಸೇರಿದಂತೆ ಬೆಂಗಳೂರಿನ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ, ಬಂಧಿಸಿದ್ದರು. ನಂತರ ಅವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಮತ್ತೊಂದೆಡೆ ಜನಾರ್ದನ ರೆಡ್ಡಿ ಬಂಧನವನ್ನು ಖಂಡಿಸಿ ಅಭಿಮಾನಿಗಳು, ಬೆಂಬಲಿಗರು ಮಂಗಳವಾರ ಬಳ್ಳಾರಿ ಹಾಗೂ ಸಿರಗುಪ್ಪ ಬಂದ್‌ಗೆ ಕರೆ ನೀಡಿದ್ದರು. ಬಂದ್ ವೇಳೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿ ಕಂಪ್ಯೂಟರ್‌ಗಳನ್ನು ಧ್ವಂಸಗೊಳಿಸಿದ್ದರು. ಟಯರ್‌ಗೆ ಬೆಂಕಿಹಚ್ಚಿ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ ಬುಧವಾರವೂ ಕೂಡ ಹಗರಿಬೊಮ್ಮನಹಳ್ಳಿ ಬಂದ್‌ಗೆ ಕರೆ ಕೊಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬಳ್ಳಾರಿ ಬಂದ್ ಸಂದರ್ಭದಲ್ಲಿ ಧ್ವಂಸ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪಶ್ಚಿಮ ವಲಯ ಐಜಿಪಿ ಸಂಜೀವ್ ಸಹಾಯ್ ತಿಳಿಸಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಸೆ.9ಕ್ಕೆ: ಸಿಬಿಐ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈದರಾಬಾದ್ ನ್ಯಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.