ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕೊನೆಗೂ ಎಚ್‌ಡಿಕೆಗೆ ಜಾಮೀನು: ಅರೆಸ್ಟ್ ಭೀತಿಯಿಂದ ಪಾರು (Kumaraswamy | Anitha kumaraswamy | Lokayukta | Karnataka News | Bangalore News,)
ಕೊನೆಗೂ ಎಚ್‌ಡಿಕೆಗೆ ಜಾಮೀನು: ಅರೆಸ್ಟ್ ಭೀತಿಯಿಂದ ಪಾರು
ಬೆಂಗಳೂರು, ಗುರುವಾರ, 8 ಸೆಪ್ಟೆಂಬರ್ 2011( 19:07 IST )
PR
ಜಂತಕಲ್ ಗಣಿ ಗುತ್ತಿಗೆ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿಗೆ ನೆರವು ನೀಡಿದ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಟಕಟೆ ಏರುವುದು ಹಾಗೂ ಬಂಧನ ತಪ್ಪಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾಕುಮಾರಸ್ವಾಮಿ ಸಾಕಷ್ಟು ಕಸರತ್ತು ನಡೆಸಿದ್ದು, ಇದೀಗ ಎಚ್‌ಡಿಕೆ ದಂಪತಿಗೆ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ನೀಡುವ ಮೂಲಕ ರಿಲೀಫ್ ಸಿಕ್ಕಂತಾಗಿದೆ.
ಜಂತಕಲ್ ಮತ್ತು ವಿಶ್ವಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕೋರಿ ಕುಮಾರಸ್ವಾಮಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕುಮಾರಸ್ವಾಮಿ ದಂಪತಿಗೆ ಒಂದು ದಿನ ನಿರೀಕ್ಷಣಾ ಜಾಮೀನು ನೀಡಿ, ಅಂತಿಮ ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು.
ಇಂದು ಮಧ್ಯಾಹ್ನ 12-25ಕ್ಕೆ ಅಂತಿಮ ಆದೇಶ ನೀಡಿದ ಹೈಕೋರ್ಟ್ ಪೀಠ, ಕುಮಾರಸ್ವಾಮಿ ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಲೋಕಾಯುಕ್ತ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಸೂಚಿಸಿದೆ.
ಏತನ್ಮಧ್ಯೆ ಸಮನ್ಸ್ ನೀಡಿದ್ದರೂ ಸಹ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಕುಮಾರಸ್ವಾಮಿ ದಂಪತಿ ಅನಾರೋಗ್ಯದ ನೆಪವೊಡ್ಡಿ ಪದೇ, ಪದೇ ಗೈರು ಹಾಜರಾಗುತ್ತಿರುವುದಕ್ಕೆ ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರಿಂದ ಕುಮಾರಸ್ವಾಮಿ ಅನಾರೋಗ್ಯದ ನಾಟಕವಾಡಿ, ಲೋಕಾಯುಕ್ತ ಕೋರ್ಟ್‌ಗೆ ಗೈರುಹಾಜರಾಗಿದ್ದರು. ಇದೀಗ ಕುಮಾರಸ್ವಾಮಿ ಮತ್ತು ಅನಿತಾಕುಮಾರಸ್ವಾಮಿ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಖುದ್ದು ಹಾಜರಾಗಬೇಕು. ಅಲ್ಲದೇ ಕೆಳ ನ್ಯಾಯಾಲಯದಲ್ಲಿಯೂ ಕೂಡ ಅವರಿಗೆ ನಿರೀಕ್ಷಣಾ ಜಾಮೀನು ದೊರೆಯುವ ಸಾಧ್ಯತೆಗೂ ಅಡ್ಡಿ ಇಲ್ಲದಂತಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. ಒಟ್ಟಾರೆ ಸದ್ಯಕ್ಕೆ ಕುಮಾರಸ್ವಾಮಿ ದಂಪತಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ.