ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಟಕಟೆ ಏರುವುದು ಮತ್ತು ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಹಾಗೂ ಅನಿತಾಕುಮಾರಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಸಾಕಷ್ಟು ಕಸರತ್ತು ನಡೆಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೆಯ ಪ್ರಯತ್ನ ಎಂಬಂತೆ ನಿರೀಕ್ಷಣಾ ಜಾಮೀನು ಕೊಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ಗುರುವಾರ ಅಂತಿಮ ತೀರ್ಪು ನೀಡಿದ ಹೈಕೋರ್ಟ್ ಏಕಸದಸ್ಯ ಪೀಠ, ಕುಮಾರಸ್ವಾಮಿ ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
2006-2007ರ ಅವಧಿಯಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜಂತಕಲ್ ಮೈನಿಂಗ್ ಕಂಪನಿಗೆ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡಿದ್ದಾರೆಂದು ಆರೋಪಿಸಿ ವಕೀಲ ವಿನೋದ್ ದೂರು ಸಲ್ಲಿಸಿದ್ದರು. ಅಲ್ಲದೇ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧವೂ ದೂರು ನೀಡಿದ್ದರು.
ಒಟ್ಟಾರೆ ಕುಮಾರಸ್ವಾಮಿಗೆ ರಿಲೀಫ್ ಸಿಕ್ಕಿದ್ದು, ಬಿ.ಎಸ್.ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ ಹಾಗೂ ಜಾಮೀನು ಅರ್ಜಿ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪನವರಿಗೆ ಜೈಲಾ ಅಥವಾ ಬೇಲಾ (ಜಾಮೀನು) ಎಂಬುದನ್ನು ಕಾದು ನೋಡಬೇಕಾಗಿದೆ.