ಬೆಂಗಳೂರು, ಶುಕ್ರವಾರ, 9 ಸೆಪ್ಟೆಂಬರ್ 2011( 11:34 IST )
WD
ಜಂತಕಲ್ ಗಣಿ ಗುತ್ತಿಗೆ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿಗೆ ನೆರವು ನೀಡಿದ ಪ್ರಕರಣದಲ್ಲಿ ಕೊನೆಗೂ ಮಾಜಿ ಮುಖ್ಯಮಂತ್ರಿ, ಸಂಸದ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಶಾಸಕಿ ಪತ್ನಿ ಅನಿತಾ ಕುಮಾರಸ್ವಾಮಿ ಲೋಕಾಯುಕ್ತ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.
ನ್ಯಾಯಾಲಯಕ್ಕೆ ಬರಲು ಹಲವಾರು ಬಾರಿ ಅನಾರೋಗ್ಯದ ನೆಪ ನೀಡಿ ತಪ್ಪಿಸಿಕೊಂಡಿದ್ದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಇಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರಾಗಲೇಬೇಕಿತ್ತು. ಆ ಪ್ರಕಾರ ಎಚ್‌ಡಿಕೆ ದಂಪತಿ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಸುಧೀಂದ್ರ ರಾವ್ ಅವರು, ಸೆಪ್ಟೆಂಬರ್ 24ಕ್ಕೆ ಮುಂದೂಡಿರುವುದಾಗಿ ತಿಳಿಸಿದರು.
ಜಂತಕಲ್ ಮತ್ತು ವಿಶ್ವಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕೋರಿ ಕುಮಾರಸ್ವಾಮಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಗುರುವಾರ ಈ ಕುರಿತು ಆದೇಶ ನೀಡಿದ ಹೈಕೋರ್ಟ್ ಪೀಠ, ಕುಮಾರಸ್ವಾಮಿ ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಅಲ್ಲದೇ ಖುದ್ದು ಹಾಜರಾತಿಗೆ ಸೂಚನೆ ನೀಡಿತ್ತು.
ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ಬಂಧನ ಭೀತಿಯಿಂದ ಪಾರಾಗಿದ್ದರು. ಆದರೆ, ಸಮನ್ಸ್ ನೀಡಿದ್ದರೂ ಸಹ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಕುಮಾರಸ್ವಾಮಿ ದಂಪತಿ ಅನಾರೋಗ್ಯದ ನೆಪವೊಡ್ಡಿ ಪದೇ, ಪದೇ ಗೈರು ಹಾಜರಾಗುತ್ತಿರುವುದಕ್ಕೆ ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.