ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಬೇಲ್ ವಿಚಾರಣೆ ಸೆ.12ಕ್ಕೆ; ಜೈಲಿನಲ್ಲೇ ದೇವರ ಮೊರೆ ಹೊಕ್ಕ ರೆಡ್ಡಿ (Janardana Reddy | CBI | Illegal Mining | Bellary | Karnataka News | Bangalore News)
ಬೇಲ್ ವಿಚಾರಣೆ ಸೆ.12ಕ್ಕೆ; ಜೈಲಿನಲ್ಲೇ ದೇವರ ಮೊರೆ ಹೊಕ್ಕ ರೆಡ್ಡಿ
ಬಳ್ಳಾರಿ, ಶುಕ್ರವಾರ, 9 ಸೆಪ್ಟೆಂಬರ್ 2011( 19:57 IST )
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಆಂಧ್ರಪ್ರದೇಶದ ಚಂಚಲಗುಡ ಜೈಲಿನಲ್ಲಿರುವ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಸುದೀರ್ಘ ಕಾಲ ನಡೆದಿದ್ದು, ಸಿಬಿಐ ವಿಶೇಷ ಕೋರ್ಟ್ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದೆ. ಏತನ್ಮಧ್ಯೆ ಜಾಮೀನು ದಯಪಾಲಿಸಪ್ಪಾ ಎಂದು ರೆಡ್ಡಿ ಜೈಲಿನಲ್ಲಿಯೇ ವಿಘ್ನನಿವಾರಕ ಗಣೇಶನ ಮೊರೆ ಹೋಗಿದ್ದರೆ, ಮತ್ತೊಂದೆಡೆ ಬಳ್ಳಾರಿಯಲ್ಲಿ ರೆಡ್ಡಿ ಅಭಿಮಾನಿಗಳು ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಸುದೀರ್ಘ ವಾದ-ಪ್ರತಿವಾದ; ವಿಚಾರಣೆ ಸೆ.12ಕ್ಕೆ ಅಕ್ರಮ ಗಣಿ, ಗಡಿನಾಶ ವಿಚಾರದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಕುರಿತು ಶುಕ್ರವಾರ ಸುದೀರ್ಘವಾಗಿ ವಾದ-ಪ್ರತಿವಾದ ನಡೆಯಿತು. ಅಲ್ಲದೇ ಜಾಮೀನು ಅರ್ಜಿ ವಿಚಾರಣೆಯನ್ನು ಹೈದರಾಬಾದ್ ನಾಂಪಲ್ಲಿಯ ಸಿಬಿಐ ವಿಶೇಷ ಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿತು.
ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾದ ಜಾಮೀನು ಅರ್ಜಿಯ ವಿಚಾರಣೆ ಮಧ್ಯಾಹ್ನ 12-30ರವರೆಗೆ ಮುಂದುವರಿದಿತ್ತು. ಸಿಬಿಐ ಪರ ವಕೀಲರು ತಮ್ಮ ವಾದ ಮಂಡಿಸಿ, ಜನಾರ್ದನ ರೆಡ್ಡಿಯವರು ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಾಣ ಬೆದರಿಕೆಯೊಡ್ಡುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ರೆಡ್ಡಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ಅಲ್ಲದೇ ಅತ್ಯಲ್ಪ ಅವಧಿಯಲ್ಲೇ ಅವರು ಸಾವಿರಾರು ಕೋಟಿಗಳಷ್ಟು ಹಣ ಗಳಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆಗೊಳಪಡಿಸಬೇಕಿರುವುದರಿಂದ ಆರೋಪಿಯನ್ನು ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಸಿಬಿಐ ಪರ ವಕೀಲರು ವಾದಿಸಿದರು.
ನಂತರ ಮಧ್ಯಾಹ್ನ 2-30ರಿಂದ 4-30ರವರೆಗೆ ಜನಾರ್ದನ ರೆಡ್ಡಿ ಪರ ವಕೀಲರಾದ ಸಿ.ವಿ.ನಾಗೇಶ್ ಪ್ರತಿವಾದ ಮಂಡಿಸಿದರು. ಆ ಬಳಿಕ ರೆಡ್ಡಿ ಪರ ಖ್ಯಾತ ವಕೀಲ ಉದಯ್ ಲಲಿತ್ ಅವರು 4-30ರಿಂದ 7ಗಂಟೆವರೆಗೂ ವಾದಿಸಿದರು. ಗಡಿ ವಿಚಾರವನ್ನು ಬಿಟ್ಟು ಬೇರೆಲ್ಲಾ ವಿಚಾರವನ್ನು ತನಿಖೆಗೆ ಒಳಪಡಿಸಬಹುದು. ಜನಾರ್ದನ ರೆಡ್ಡಿಯವರು ಉತ್ತಮ ಸ್ಥಾನ ಮಾನ ಹೊಂದಿರುವುದು ಕರ್ನಾಟಕದಲ್ಲಿಯೇ ಹೊರತು ಆಂಧ್ರಪ್ರದೇಶದಲ್ಲಿ ಅಲ್ಲ. ಆ ನೆಲೆಯಲ್ಲಿ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಪ್ರತಿವಾದ ಮಂಡಿಸಿದರು.
ಏತನ್ಮಧ್ಯೆ, ತಾನು ದೈಹಿಕವಾಗಿ ತುಂಬಾ ಆಯಾಸಗೊಂಡಿರುವುದರಿಂದ ವಾದವನ್ನು ಸೋಮವಾರ ಮಂಡಿಸುವುದಾಗಿ ನ್ಯಾಯಾಧೀಶರಲ್ಲಿ ವಕೀಲ ಉದಯ್ ಲಲಿತ್ ಅವರು ಮನವಿ ಮಾಡಿಕೊಂಡಿದ್ದರಿಂದ, ಸಿಬಿಐ ವಿಶೇಷ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ದೇವ್ರೇ ಜಾಮೀನು ಕೊಡುವಂತೆ ಮಾಡಿಸಪ್ಪಾ: ಚಂಚಲಗುಡ ಜೈಲಿನಲ್ಲಿರುವ ತಮ್ಮ ನಾಯಕ ಜನಾರ್ದನ ರೆಡ್ಡಿಯ ಎಲ್ಲಾ ವಿಘ್ನಗಳು ನಿವಾರಣೆಯಾಗಿ, ಜಾಮೀನು ದೊರೆತು ಬಿಡುಗಡೆಯಾಗಲಿ ಎಂದು ರೆಡ್ಡಿ ಅಭಿಮಾನಿಗಳು, ಬೆಂಬಲಿಗರು ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕನಕದುರ್ಗಮ್ಮ ದೇವಿ ಸನ್ನಿಧಿಯ ಹೊರಭಾಗದಲ್ಲಿ 101 ತೆಂಗಿನಕಾಯಿ ಒಡೆದು, ಜನಾರ್ದನ ರೆಡ್ಡಿಗೆ ಜಾಮೀನು ದೊರೆಯುವಂತೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಪ್ರತಿಬಾರಿ ಸಂಕಷ್ಟ ಬಂದಾಗಲೆಲ್ಲ ಜನಾರ್ದನ ರೆಡ್ಡಿ ಹಾಗೂ ಕುಟುಂಬ ಕನಕದುರ್ಗಮ್ಮ ಮೊರೆ ಹೋಗುತ್ತಿದ್ದು, ಆ ನಿಟ್ಟಿನಲ್ಲಿ ಜನಾರ್ದನ ರೆಡ್ಡಿ ಅಭಿಮಾನಿಗಳು ಇದೀಗ ದೇವಿಯ ಮೊರೆ ಹೋಗಿದ್ದಾರೆ.
ಜೈಲಿನಲ್ಲೇ ಗಣೇಶನ ಮೊರೆ ಹೋದ ರೆಡ್ಡಿ: ಚಂಚಲಗುಡ ಜೈಲಿನಲ್ಲಿನಲ್ಲಿರುವ ಜನಾರ್ದನ ರೆಡ್ಡಿ ಇಂದು ಬೆಳಿಗ್ಗೆ ತಮ್ಮ ಏಳು ಮಂದಿ ಕೈದಿಗಳೊಂದಿಗೆ ವಿಘ್ನ ವಿನಾಶಕ ಗಣೇಶನ ಮೊರೆ ಹೋಗಿರುವುದಾಗಿ ಜೈಲು ಅಧಿಕಾರಿಗಳ ಮೂಲಗಳು ತಿಳಿಸಿವೆ. ತಮಗೆ ಜಾಮೀನು ದೊರೆಯುಂತೆ ಗಣಪತಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಪುಳಿಯೋಗರೆ ಸೇವಿಸಿದ್ದಾರೆನ್ನಲಾಗಿದೆ.