ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಅಣ್ಣಾ ಹಜಾರೆ ಬರಬೇಕು; ವಿದ್ಯುತ್ ಕಂಬ ಏರಿ ಕುಳಿತ ಯುವಕ! (Anna hazare | Santhosh hegde | High tention line | anekal | Karnataka News | Bangalore News)
ಅಣ್ಣಾ ಹಜಾರೆ ಬರಬೇಕು; ವಿದ್ಯುತ್ ಕಂಬ ಏರಿ ಕುಳಿತ ಯುವಕ!
ಬೆಂಗಳೂರು, ಶನಿವಾರ, 10 ಸೆಪ್ಟೆಂಬರ್ 2011( 11:57 IST )
ಭ್ರಷ್ಟಾಚಾರ ವಿರೋಧಿ ಹಾಗೂ ಪ್ರಬಲ ಜನಲೋಕಪಾಲ್ ಮಸೂದೆಗಾಗಿ ಆಮರಣಾಂತ ಉಪವಾಸ ನಡೆಸಿ ದೇಶ-ವಿದೇಶಗಳ ಗಮನ ಸೆಳೆದಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ತಮ್ಮ ಊರಿಗೆ ಖುದ್ದಾಗಿ ಬರಬೇಕೆಂದು ಹಠ ಹಿಡಿದ ಯುವಕನೊಬ್ಬ ಹೈಟೆನ್ಶನ್ ಕಂಬ ಏರಿ ಕುಳಿತು ರಂಪಾಟ ನಡೆಸಿದ ಘಟನೆ ಶುಕ್ರವಾರ ಬನ್ನೇರುಘಟ್ಟ ರಸ್ತೆ ಬಳಿಯ ಕಲ್ಕೆರೆ ಎಂಬಲ್ಲಿ ನಡೆಯಿತು.
ಆನೇಕಲ್‌ನ ಲಕ್ಷ್ಮೀಪುರದಲ್ಲಿರುವ ದೇವಸ್ಥಾನ ಅಭಿವೃದ್ಧಿಪಡಿಸಬೇಕು, ಕೂಡಲೇ ಕಾಮಗಾರಿ ಆರಂಭಿಸಬೇಕು. ಇದಕ್ಕಾಗಿ ಅಣ್ಣಾ ಹಜಾರೆ ಮತ್ತು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ಖುದ್ದಾಗಿ ಇಲ್ಲಿಗೆ ಬರಬೇಕು. ಅಲ್ಲಿಯವರೆಗೆ ತಾನು ಕಂಬದಿಂದ ಕೆಳಗಿಳಿಯಲ್ಲ ಎಂದು ಹೇಳುವ ಮೂಲಕ ಯುವಕ ಚಂದ್ರು ಎಂಬಾತ ಎಲ್ಲರನ್ನೂ ಗೋಳು ಹೊಯ್ದುಕೊಂಡಿದ್ದ.
ಲಕ್ಷ್ಮೀಪುರ ನಿವಾಸಿಯಾದ ಚಂದ್ರು ಎಂಬ ಯುವಕ ಮುನೇಶ್ವರ ದೇಗುಲದ ತ್ರಿಶೂಲ ಕೈಯಲ್ಲಿ ಹಿಡಿದು, ಕುತ್ತಿಗೆ ಹೂವಿನ ಹಾರ ಹಾಕಿಕೊಂಡು ಸುಮಾರು 50 ಅಡಿ ಎತ್ತರದ ಹೈಟೆನ್ಶನ್ ಕಂಬ ಏರಿ ಕುಳಿತು ತನ್ನ ಬೇಡಿಕೆ ಈಡೇರಿಸುವಂತೆ ಕೂಗಾಡುತ್ತಿದ್ದ. ಇದರಿಂದ ಸ್ಥಳೀಯ ಜನರು ಜಮಾಯಿಸಿ ಯುವಕನ ಮನವೊಲಿಸುವ ಪ್ರಯತ್ನ ಮಾಡಿದರು. ನಂತರ ಅಗ್ನಿಶಾಮಕದಳದ ಸಿಬ್ಬಂದಿಗಳು ಬಂದು ಕೆಲವು ಗಂಟೆಗಳ ಕಾಲ ಯುವಕನ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಒಟ್ಟಾರೆ ಯುವಕನ ಹುಚ್ಚಾಟದಿಂದಾಗಿ ಸ್ಥಳೀಯ ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವಂತಾಗಿತ್ತು. ಯಾಕೆಂದರೆ ಯುವಕ ಹೈಟೆನ್ಶನ್ ಕಂಬ ಏರಿ ಕುಳಿತಿದ್ದ. ಮುನ್ನೆಚ್ಚರಿಕೆ ನಿಟ್ಟಿನಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ನನ್ನ ಬೇಡಿಕೆ ಈಡೇರಿಸಿ, ಇಲ್ಲದಿದ್ರೆ ನಾನು ಕಂಬದಿಂದ ಕೆಳಗಿಳಿಯಲ್ಲ ಎಂದು ಬೊಬ್ಬಿಡುತ್ತಿದ್ದ. ಯಾರು ಎಷ್ಟು ಹೇಳಿದರೂ ಯುವಕ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ತಡರಾತ್ರಿಯವರೆಗೂ ಯುವಕ ಚಂದ್ರು ಮನವೊಲಿಸಲು ಸಾಧ್ಯವಾಗಿಲ್ಲ. ಯುವಕನನ್ನು ಕೆಳಗಿಳಿಸಲಾಯಿತೇ ಅಥವಾ ಆತ ಕಂಬದ ಮೇಲೆಯೇ ರಾತ್ರಿ ಕಳೆದಿದ್ದಾನೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಆತ ಮಾನಸಿಕ ಅಸ್ವಸ್ಥ ಎಂಬುದಾಗಿಯೂ ಸ್ಥಳೀಯರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.