ಬೆಂಗಳೂರು, ಮಂಗಳವಾರ, 13 ಸೆಪ್ಟೆಂಬರ್ 2011( 10:04 IST )
PR
ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಮೋಹಕ ನಟಿ ರಮ್ಯಾ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಶಾಂತಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೂತ್ ಸಮಿತಿಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ರಮ್ಯಾ ರಾಜಕೀಯ ರಂಗದಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬೂತ್ ಮಟ್ಟದಲ್ಲಿ ಪಧಾಧಿಕಾರಿಯಾಗುವ ನಿಟ್ಟಿನಲ್ಲಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಬೂತ್ ಮಟ್ಟದ ಪದಾಧಿಕಾರಿಗಳು ನಂತರ ವಿಧಾನಸಭೆ, ಲೋಕಸಭಾ ಕ್ಷೇತ್ರ ಮತ್ತು ರಾಜ್ಯ ಮಟ್ಟದ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
ಚಿತ್ರರಂಗ ಬಿಟ್ಟು ರಾಜಕೀಯ ಸೇರಲಾರೆ ಎಂದೆಲ್ಲ ಹೇಳಿಕೆ ನೀಡುತ್ತಲೇ ಬಂದಿದ್ದ ರಮ್ಯಾ ಇದೀಗ ಯುವ ಕಾಂಗ್ರೆಸ್ ಹೊಸ ಪಧಾಧಿಕಾರಿಗಳ ಆಯ್ಕೆ ಸಂಬಂಧ ಸ್ಪರ್ಧಾಕಣಕ್ಕಿಳಿದಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದರಂತೆ ಶಾಂತಿನಗರ ಬೂತ್‌ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.