ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಬಂಧನ ಭೀತಿ; ರೆಡ್ಡಿ ಆಪ್ತ ಖಾರದಪುಡಿ ಮಹೇಶ್, ನಾಗರಾಜ್ ನಾಪತ್ತೆ (Janardana Reddy | CBI | Kharadapudi mahesh | Illegal Mining | Karnataka News | Bangalore News,)
ಬಂಧನ ಭೀತಿ; ರೆಡ್ಡಿ ಆಪ್ತ ಖಾರದಪುಡಿ ಮಹೇಶ್, ನಾಗರಾಜ್ ನಾಪತ್ತೆ
ಬಳ್ಳಾರಿ, ಸೋಮವಾರ, 19 ಸೆಪ್ಟೆಂಬರ್ 2011( 15:45 IST )
ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಹೈದರಾಬಾದ್ ಚಂಚಲಗುಡ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ ಮತ್ತೊಂದೆಡೆ ಸಿಬಿಐ ತಂಡ ರೆಡ್ಡಿ ಆಪ್ತರ ಮನೆಯ ಮೇಲೆ ಕಳೆದ ಮೂರು ದಿನಗಳಿಂದ ದಾಳಿ ನಡೆಸುತ್ತಿದೆ. ಏತನ್ಮಧ್ಯೆ ರೆಡ್ಡಿ ಆಪ್ತರಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದೆ.
ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಹೊಸಪೇಟೆಯಲ್ಲಿರುವ ನಿವಾಸಗಳ ಮೇಲೆ ಸೋಮವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ರೆಡ್ಡಿ ಆಪ್ತರಾದ ಸಂಡೂರು ಟಿಚರ್ಸ್ ಕಾಲೋನಿಯಲ್ಲಿರುವ ಎಸ್‌ಟಿಡಿ ಈ.ಮಂಜುನಾಥ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಜನಾರ್ದನ ರೆಡ್ಡಿ ಬಂಧನದ ದಿನದಿಂದ ಜಾಗೃತರಾಗಿದ್ದ ಮಹೇಶ್ ಮತ್ತು ನಾಗರಾಜ್ ತಾವೂ ಸಿಬಿಐ ಬಂಧನಕ್ಕೆ ಒಳಗಾಗಬಹುದು ಎಂಬ ಭೀತಿಯಿಂದ ನಾಪತ್ತೆಯಾಗಿರುವುದು ದೃಢಪಟ್ಟಿದೆ. ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರ ನೀಡಿರುವ ವರದಿಯಲ್ಲಿ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಪಾತ್ರದ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿತ್ತು. ನಕಲಿ ಪರವಾನಿಗೆ ಸೃಷ್ಟಿಸಿ ಅದಿರು ಸಾಗಾಟ ಮಾಡುತ್ತಿರುವ ಆರೋಪ ಕೂಡ ಇವರ ಮೇಲಿದೆ.
ಎರಡು ದಿನಗಳ ಹಿಂದಷ್ಟೇ ಜನಾರ್ದನ ರೆಡ್ಡಿ ಕಾರು ಚಾಲಕ ಪಾಷಾ ಮನೆ ಮೇಲೂ ಸಿಬಿಐ ನಿರ್ದೇಶನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ನಾಲ್ಕು ಲಕ್ಷ ರೂಪಾಯಿ ನಗದು ಹಾಗೂ ಮಹತ್ವದ ದಾಖಲೆ ದೊರೆತಿತ್ತು. ಅಲ್ಲದೇ ರೆಡ್ಡಿ ಅಳಿಯ ರಾಜಗೋಪಾಲ್ ಮನೆ ಮೇಲೂ ದಾಳಿ ನಡೆಸಿದ್ದರು. ಆದರೆ ಅಲ್ಲಿ ಯಾವುದೇ ನಗದು ಹಣ ಸಿಕ್ಕಿಲ್ಲವಾಗಿತ್ತು.
ಅಕ್ರಮ ಗಣಿ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆ ಕಲೆ ಹಾಕುವುದಕ್ಕಾಗಿ ರೆಡ್ಡಿ ಆಪ್ತರು, ಸಂಬಂಧಿಗಳ ಮನೆ ಮೇಲಿನ ದಾಳಿಯನ್ನು ಮುಂದುವರಿಸಿದೆ.