ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಮೌನಕ್ಕೆ ಶರಣಾಗಿದ್ದು, ಜೈಲಿನ ದಿನಚರಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ಘಟಾನುಘಟಿ ವಕೀಲರಾದ ಉದಯ್ ಲಲಿತ್, ಸಿ.ವಿ.ನಾಗೇಶ್‌ರಂಥವರು ಸತತವಾಗಿ ವಾದ ಮಂಡಿಸಿದ್ದರೂ ಕೂಡ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿರುವುದು ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಆಡಳಿತ ನಿರ್ದೇಶಕ ಶ್ರೀನಿವಾಸ್ ರೆಡ್ಡಿಗೆ ತೀವ್ರ ಹಿನ್ನಡೆಯಾಗಿದೆ.
ಇದೀಗ ಜೈಲಿನಲ್ಲಿರುವ ಶಿವ ಮಂದಿರದಲ್ಲಿ ಧ್ಯಾನ, ಪೂಜೆ, ಆಧ್ಯಾತ್ಮ ಪುಸ್ತಕಗಳ ಓದಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಧ್ಯಾನ, ಉಪಾಹಾರ, ಊಟದ ಸಮಯ ಬಿಟ್ಟರೆ ಬ್ಯಾರಕ್‌ನಿಂದ ಹೊರಗೆ ಬರುವುದು ಕಡಿಮೆ. ಅಷ್ಟೇ ಅಲ್ಲ, ಗಣಿಗಾರಿಕೆ, ಸಿಬಿಐ ವಿಚಾರಣೆಗೆ ಸಂಬಂಧಿಸಿದ ವರದಿಗಳನ್ನು ಜೈಲು ಅಧಿಕಾರಿಗಳು ತೆಗೆದು ಹಾಕಿಯೇ ದಿನಪತ್ರಿಕೆಗಳನ್ನು ಓದಲು ರೆಡ್ಡಿಗೆ ಕೊಡುತ್ತಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ ಹೈದರಾಬಾದ್ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಕಲಾಪ ನಡೆಯಲು ತೆಲಂಗಾಣ ಚಳವಳಿಕಾರರು ಅಡ್ಡಿಪಡಿಸಿದ್ದಾರೆ. ಗಣಿ ರೆಡ್ಡಿದ್ವಯರ ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಒಂಬತ್ತು ದಿನಗಳ ವಶಕ್ಕೆ ನೀಡಲು ಸಿಬಿಐ ಕೋರಿದೆ.
ಗಡಿಯಲ್ಲಿ ವಾಹನಗಳ ಮೇಲೆ ಹದ್ದಿನಗಣ್ಣು: ಬಳ್ಳಾರಿಯಿಂದ ಭಾರಿ ಮೊತ್ತದ ನಗದು ಸಾಗಣೆ ಸಂಶಯ ಬಲಗೊಂಡಿದ್ದು, ಕರ್ನಾಟಕ-ಆಂಧ್ರ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಹದ್ದಿನ ಕಟ್ಟಿಟ್ಟು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಸಮೀಪದ ಹಗರಿ ಚೆಕ್‌ಪೋಸ್ಟ್, ಚೇಳ್ಳಗುರ್ಕಿ ತಿರುವು, ಡಿ.ಹಿರೇಹಾಳ್, ರಾಯದುರ್ಗಂ, ಕಣೇಕಲ್, ಗುಂತಕಲ್ ರಸ್ತೆಯಲ್ಲಿ ಪೊಲೀಸರ ಕಣ್ಗಾವಲು ಬುಧವಾರ ಜೋರಾಗಿತ್ತು.
ಕಾರು, ಜೀಪ್, ಬಸ್, ಲಾರಿ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಸಂಶಯ ಕಂಡಲ್ಲಿ ವಸ್ತುಗಳನ್ನು ಕೆಳಗೆ ಇಳಿಸಿ ತಪಾಸಣೆ ನಡೆಸುತ್ತಿದ್ದರು. ಬಳ್ಳಾರಿಯಿಂದ ಹೈದರಾಬಾದ್‌ಗೆ ಸೆ.15ರಂದು 4.95 ಕೋಟಿ ರೂ. ಸಾಗಿಸುತ್ತಿದ್ದ ಇಬ್ಬರನ್ನು ಗುಂತಕಲ್ ಪೊಲೀಸರು ವಶಕ್ಕೆ ತೆಗೆದುಕೊಂಡ ಬೆನ್ನ ಹಿಂದೆಯೇ ಬಳ್ಳಾರಿಯಲ್ಲಿ ವದಂತಿಗಳು ಗರಿಗೆದರಿವೆ. ಆ ನಿಟ್ಟಿನಲ್ಲಿ ಪೊಲೀಸರು ಕಣ್ಗಾವಲಿಟ್ಟಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಸೆ.29ಕ್ಕೆ: ಏತನ್ಮಧ್ಯೆ, ಗುರುವಾರ ಜನಾರ್ದನ ರೆಡ್ಡಿ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಂಪಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ. ಅಲ್ಲದೇ ಸಿಬಿಐ ಕಸ್ಟಡಿಗೆ ಒಪ್ಪಿಸಬೇಕೆಂಬ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಭೇಟಿಗೆ ನಿರಾಕರಿಸಿದ ಜನಾರ್ದನ ರೆಡ್ಡಿ: ಹೈದರಾಬಾದ್‌ನ ಚಂಚಲಗುಡ ಜೈಲಿನಲ್ಲಿರುವ ಆರೋಪಿ ಜನಾರ್ದನ ರೆಡ್ಡಿ, ಉದ್ಯಮಿಗಳು, ಸ್ಥಳೀಯ ಮುಖಂಡರ ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ನಿರಂತರ ಶಿವಪೂಜೆಯಲ್ಲಿ ತೊಡಗಿರುವ ರೆಡ್ಡಿ