ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಅಕ್ರಮ ಆಸ್ತಿ: ಎಚ್‌ಡಿಕೆ ಆಯ್ತು,ಈಗ ಎಚ್.ಡಿ.ಬಾಲಕೃಷ್ಣೇಗೌಡ ಸರದಿ (Kumaraswamy | Balakrishne gowda | Deve gowda | Lokayukta | KAS | Karnataka News | Bangalore News,)
ಅಕ್ರಮ ಆಸ್ತಿ: ಎಚ್‌ಡಿಕೆ ಆಯ್ತು,ಈಗ ಎಚ್.ಡಿ.ಬಾಲಕೃಷ್ಣೇಗೌಡ ಸರದಿ
ಬೆಂಗಳೂರು, ಗುರುವಾರ, 22 ಸೆಪ್ಟೆಂಬರ್ 2011( 13:38 IST )
ಜಂತಕಲ್ ಮೈನಿಂಗ್ ಕಂಪನಿ ಗಣಿ ಗುತ್ತಿಗೆ ನವೀಕರಣ, ವಿಶ್ವಭಾರತಿ ಟ್ರಸ್ಟ್‌ಗೆ ನೆರವು ನೀಡಿರುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಲೋಕಾಯುಕ್ತ ವಿಶೇಷ ಕೋರ್ಟ್ ಕಟಕಟೆ ಏರಿದ್ದರೆ, ಇದೀಗ ದೇವೇಗೌಡರ ಮತ್ತೊಬ್ಬ ಪುತ್ರ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಡಿ.ಬಾಲಕೃಷ್ಣೇ ಗೌಡ ವಿರುದ್ಧವೂ ಖಾಸಗಿ ದೂರು ದಾಖಲಾಗಿದೆ.
ಎಚ್.ಡಿ.ಬಾಲಕೃಷ್ಣೇ ಗೌಡ ಕೆಎಎಸ್ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ ಸಂಪತ್ತು ಗಳಿಸಿದ್ದಾರೆಂದು ಆರೋಪಿಸಿ ಭದ್ರಾವತಿ ನಿವಾಸಿ ಎಸ್.ಎಲ್.ಬಾಲಕೃಷ್ಣ ಎಂಬವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.
1984ರಲ್ಲಿ ಎಚ್.ಡಿ.ಬಾಲಕೃಷ್ಣೇ ಗೌಡ ಅವರು ಕೆಎಎಸ್ ಸೇವೆಗೆ ಸೇರಿದ್ದರು. ಅವರು ಸ್ಟೇಟ್ ರೆವಿನ್ಯೂ ಇಲಾಖೆಯಲ್ಲಿ ಸ್ಪೆಶಲ್ ಡೆಪ್ಯೂಟಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದು, 2005ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.
ಬಾಲಕೃಷ್ಣೇ ಗೌಡ ಅವರ ಒಟ್ಟು ಆದಾಯ 40 ಲಕ್ಷವಾಗಿದ್ದು, ಆದರೆ ಆ ಸಂದರ್ಭದಲ್ಲಿಯೇ 70 ಕೋಟಿ ಗಳಿಸಿದ್ದರು. ಅಲ್ಲದೇ ಈಗ ಬಾಲಕೃಷ್ಣೇಗೌಡ ಸಂಪಾದಿಸಿರುವ ಆಸ್ತಿಯ ಮೌಲ್ಯ 500ಕೋಟಿಗೂ ಹೆಚ್ಚಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಗುರುವಾರ ಲೋಕಾಯುಕ್ತ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹೋದರ ಎಚ್.ಡಿ.ಬಾಲಕೃಷ್ಣೇಗೌಡ ಒಡೆತನದ ಟ್ರಸ್ಟ್‌ಗೆ ಗಣಿ ಕಂಪನಿಗಳಿಂದ ಸುಮಾರು 250 ಕೋಟಿ ರೂಪಾಯಿ ಹಣ ಸಂದಾಯವಾಗಿರುವುದಾಗಿ ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ.ಪುಟ್ಟಸ್ವಾಮಿ ಗಂಭೀರವಾಗಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.