ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ಖನಿಜ ಸಂಪತ್ತಿನತ್ತ ಎಫ್‌ಡಿಐನವರ ಚಿತ್ತ..!
ಮಂಜುನಾಥ ಬಂಡಿ

ಭಾರತ ದೇಶ ಹಿಂದೆಂದೂ ಕಂಡು ಕೇಳರಿಯದಷ್ಟು ವೇಗವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದ್ದು, ತನ್ಮೂಲಕ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿದೆ. ದೇಶದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣಲು ನಮ್ಮ ರಾಜಕೀಯ ನೇತಾರರು, ಆರ್ಥಿಕ ಮತ್ತು ವಾಣಿಜ್ಯ ತಜ್ಞರು ದಶಕಗಳ ಹಿಂದೆ ತೆಗೆದುಕೊಂಡ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪ್ರಭಾವ.

ಇಂದು ಭಾರತದ ಎಲ್ಲ ರಂಗಗಳಲ್ಲಿಯೂ, ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದು ಬರುತ್ತಲಿದೆ. ಇದರಿಂದಾಗಿಯೇ ಇಂದು ಭಾರತದ ಉದ್ಯಮಿಗಳ ಕೋಟ್ಯಾಂತರ ರೂಪಾಯಿ ಹಣವನ್ನು ಸೆನ್ಸೆಕ್ಸ್ ಮೂಲಕ ರಾತೋರಾತ್ರಿ ಗಳಿಸುತ್ತಿದ್ದು, ಎಲ್ಲ ರಂಗಗಳಲ್ಲಿಯೂ ಎಫ್‌ಡಿಐಯನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದ್ದಾರೆ.

ಇದೀಗ ದೇಶಕ್ಕೆ ಮತ್ತೊಂದು ದೊಡ್ಡ ಮೊತ್ತದ ಎಫ್‌ಡಿಐ ಹರಿದು ಬರುವ ನಿರೀಕ್ಷೆ ಇದ್ದು, ಇದಕ್ಕೆ ಕೇಂದ್ರ ಸರಕಾರದ ಹಸಿರು ನಿಶಾನೆ ಬಾಕಿ ಇದೆ. ಭಾರತದಲ್ಲಿ ಹೇರಳವಾಗಿರುವ ಖನಿಜ ಸಂಪತ್ತಿನ ಮೇಲೆ ನಮ್ಮ ವಿದೇಶಿ ನೇರ ಬಂಡವಾಳ ಹೂಡಿಕೆದಾರರ ದೃಷ್ಟಿ ಬಿದ್ದಿದ್ದು, ನೇರವಾಗಿ ಗಣಿಗಾರಿಕೆ ಉದ್ಯಮಕ್ಕೆ ಲಗ್ಗೆ ಇಡುವ ಯೋಜನೆಯನ್ನು ರೂಪಿಸಿದ್ದಾರೆ.

ಈ ಕುರಿತು ನಮ್ಮ "ರಾಷ್ಟ್ರೀಯ ಖನಿಜ ನೀತಿ" (ಎನ್‌ಎಂಪಿ) ಸದಸ್ಯರು, ಕೇಂದ್ರ ಸರಕಾರದೊಂದಿಗೆ ಶೀಘ್ರದಲ್ಲಿಯೇ ಚರ್ಚೆ ನಡೆಸಲಿದ್ದು, ಈ ಕ್ಷೇತ್ರಕ್ಕೆ ಮುಂದಿನ ಐದು ವರ್ಷಗಳಲ್ಲಿ 1.25 ಶತಕೋಟಿ ಅಮೆರಿಕನ್ ಡಾಲರ್ (5000 ಕೋಟಿ ರೂಪಾಯಿ) ಹರಿದು ಬರಲಿರುವುದರಿಂದ, ಕೇಂದ್ರ ಸಚಿವ ಸಂಪುಟ ಸಭೆ ಯಾವ ನಿರ್ಣಯ ಕೈಗೊಳ್ಳುತ್ತಿದೆ ಎನ್ನುವುದರ ಮೇಲೆ ಈ ಎಫ್‌ಡಿಐ ಹಣ ಹರಿದು ಬರುವ ನಿರ್ಧಾರ ನಿಂತಿದೆ ಎನ್ನುತ್ತಾರೆ ನೀತಿ ಸಮಿತಿಯ ಸದಸ್ಯರು.

ಖನಿಜ ಸಂಪತ್ತಿನ ಕ್ಷೇತ್ರದಲ್ಲಿ ದೀರ್ಘಕಾಲದ ರಫ್ತು ನೀತಿಗೆ ಸ್ಥಿರತೆ ಮತ್ತು ವಾಣಿಜ್ಯಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾದರೆ ಮತ್ತು ಖನಿಜ ರಫ್ತುದಾರರಿಗೆ ಸರಕಾರ ಸಕಲ ಸೌಲಭ್ಯಗಳನ್ನು ಒದಗಿಸುವುದಾದರೆ, ಈ ವಿದೇಶಿ ನೇರ ಬಂಡವಾಳವನ್ನು ನಾವು ಈ ಕ್ಷೇತ್ರದಲ್ಲಿ ನಿರೀಕ್ಷೆ ಮಾಡಬಹುದು ಎಂದು ಗಣಿ ಸಚಿವಾಲಯ ಸರಕಾರಕ್ಕೆ ಕಳುಹಿಸಿರುವ ತನ್ನ ವರದಿಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ನೀತಿಯಿಂದಾಗಿ ನಮಗೆ ಸಾಧಕ ಮತ್ತು ಭಾಧಕಗಳೆರಡೂ ಇವೆ. ದೇಶದ ಅಪಾರ ನೈಸರ್ಗಿಕ ಸಂಪತ್ತು ನಾಶವಾಗುತ್ತದೆ ಎನ್ನುವ ನೋವು ಒಂದೆಡೆಯಾದರೆ, ಇನ್ನೊಂದೆಡೆ ದೇಶದ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ವಿದೇಶಿ ನೇರ ಬಂಡವಾಳದ ಅವಶ್ಯಕತೆ ಇದ್ದು, ಈ ಕ್ರಮದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವಹಿವಾಟು ವೃದ್ಧಿಸಲಿದೆ ಎನ್ನುವ ಸಂತಸ.

ಒಂದುವೇಳೆ, ಕೇಂದ್ರ ಸಚಿವ ಸಂಪುಟವು ಈ ಕ್ಷೇತ್ರದ ಎಫ್‌ಡಿಐಗೆ ಹಸಿರು ನಿಶಾನೆ ತೋರಿಸಿದ್ದೇ ಆದರೆ, ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿ ಅವರಿಂದ ತೀವ್ರ ಪ್ರತಿಭಟನೆ ಎದುರಿಸಬಹುದು. ಇನ್ನೊಂದೆಡೆ, ಈ ಯೋಜನೆಗೆ ಹಸಿರು ನಿಶಾನೆ ತೋರಿಸದಿದ್ದರೆ, ಗಣಿ ಉದ್ಯಮಗಳಿಂದ, ಖನಿಜ ರಫ್ತುದಾರರಿಂದ ತೀವ್ರ ವಿರೋಧಕ್ಕೆ ಒಳಗಾಗಲಿದೆ. ಇವೆರಡರ ನಡುವೆ ಬಿಸಿ ತುಪ್ಪವನ್ನು ಉಗುಳಲೂ ಬಾರದೇ, ನುಂಗಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಕೇಂದ್ರ ಸರಕಾರ ಸಿಲುಕಿದೆ. ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಮತ್ತಷ್ಟು
ನೋಂದಣಿರಹಿತ ಸಂಸ್ಥೆಗಳಿಂದ ಹಣದ ಒಳಹರಿವು: ಚಿದಂಬರಂ
ಆರ್ಥಿಕ ಸಹಕಾರ: ಭಾರತ, ಒಮನ್ ಚರ್ಚೆ
ಮೂಲಸೌಕರ್ಯ ಯೋಜನೆಗಳ ಶೀಘ್ರ ಜಾರಿ ಅಗತ್ಯ-ಪಿಎಂ
ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ
ಸೂಚ್ಯಂಕದಲ್ಲಿ ಭಾರಿ ಏರಿಕೆ