ಸಣ್ಣ ಕಾರು 'ನ್ಯಾನೋ' ನಿರ್ಮಾಣಕ್ಕಾಗಿ 1000 ಎಕರೆ ಜಮೀನು ಕೊಡುಗೆಯ ಭರವಸೆ ನೀಡಿದ್ದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಟಾಟಾ ಮೋಟಾರ್ ಅಧಿಕಾರಿಗಳು, ಈ ಕುರಿತು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರೊಂದಿಗೆ ಮುಖ್ಯಮಂತ್ರಿ ಮಾತುಕತೆಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸೆಪ್ಟೆಂಬರ್ 18ರಂದು ಟಾಟಾ ಅಧಿಕಾರಿಗಳು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ಸಂದರ್ಭ ಈ ಭರವಸೆ ನೀಡಲಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವಾರ ಟಾಟಾ ಮೋಟಾರ್ಸ್ ರವಿ ಕಾಂತ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹಿಂಸಾಚಾರ ಮತ್ತು ಪ್ರತಿಭಟನೆಗಳಿಂದ ತತ್ತರಿಸಿರುವ ಸಿಂಗೂರಿನಿಂದ ನ್ಯಾನೋ ಯೋಜನೆಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸುವುದಾದರೆ ಎಲ್ಲ ರೀತಿಯ ಸೌಲಭ್ಯ ಒದಗಿಸುವುದಾಗಿ ರಾಜ್ಯವು ಟಾಟಾ ಸಂಸ್ಥೆಗೆ ಭರವಸೆ ನೀಡಿತ್ತು.
ನ್ಯಾನೋ ಯೋಜನೆಯನ್ನು ತಮ್ಮ ರಾಜ್ಯಕ್ಕೆ ಎಳೆದುತರಲು ಹಲವಾರು ರಾಜ್ಯಗಳು ಪ್ರಯತ್ನಿಸುತ್ತಿದ್ದು, ಕರ್ನಾಟಕ ಸಚಿವ ಸಂಪುಟವಂತೂ ಸಾವಿರ ಎಕರೆ ಭೂಮಿ ಒದಗಿಸುವ ಕುರಿತು ಈಗಾಗಲೇ ನಿರ್ಣಯ ಕೈಗೊಂಡಿದೆ. ಟಾಟಾ ಮೋಟಾರ್ಸ್ ಧಾರವಾಡದಲ್ಲಿ ವಾಹನ ನಿರ್ಮಾಣ ಸ್ಥಾವರವನ್ನು ಹೊಂದಿದ್ದು, ಅಲ್ಲಿಂದಲೇ ಟಾಟಾ ಬಸ್ಸುಗಳು ಮತ್ತು ಟ್ರ್ಯಾಕ್ಟರ್‌ಗಳು ನಿರ್ಮಾಣವಾಗುತ್ತಿವೆ.
ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ಒರಿಸ್ಸಾ ಮತ್ತು ಗುಜರಾತ್ ರಾಜ್ಯಗಳೂ ನ್ಯಾನೋ ಕಾರು ನಿರ್ಮಾಣ ಯೋಜನೆಗಾಗಿ ಟಾಟಾ ಸಂಸ್ಥೆಯ ಮನವೊಲಿಕೆಗೆ ಪ್ರಯತ್ನಿಸುತ್ತಿವೆ.
|