ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
 
ಮಕ್ಕಳ ದಿನಾಚರಣೆ ಎಷ್ಟು ಅರ್ಥಪೂರ್ಣ?
ಗುಣವರ್ಧನ ಶೆಟ್ಟಿ
PTI
ಚಾಚಾ ನೆಹರು ಹುಟ್ಟಿದ ದಿನವಾದ ನವೆಂಬರ್ 14ರಂದು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷವೂ ಆಚರಿಸುತ್ತಿರುವ ಈ ಮಕ್ಕಳದಿನಾಚರಣೆ ಎಷ್ಟರಮಟ್ಟಿಗೆ ಅರ್ಥಪೂರ್ಣವೆನಿಸಿದೆ ಎಂಬ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿ ಅಕ್ಷರಶಃ ಸತ್ಯ. ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸಬೇಕಾದ ಜವಾಬ್ದಾರಿ ಪೋಷಕರ ಹೆಗಲಿದೆ ಬಿದ್ದಿದೆ.


ಆದರೆ ಅವರನ್ನು ಸತ್ಪ್ರಜೆಗಳಾಗಿ ಬೆಳೆಸುವ ದಿಕ್ಕಿನಲ್ಲಿ ಮಕ್ಕಳನ್ನು ಅತಿಯಾದ ಶಿಸ್ತಿಗೆ ಒಳಪಡಿಸುವುದು ಸಹ್ಯವಲ್ಲ. ಬಾಲ್ಯದಲ್ಲಿ ವಯೋಸಹಜ ಪ್ರವೃತ್ತಿಯಂತೆ ಆಟವಾಡುವುದೆಂದರೆ ಮಕ್ಕಳಿಗೆ ಬಲುಇಷ್ಟ. ಊಟ, ತಿಂಡಿಯನ್ನು ಮರೆತು ಕೆಲವೊಮ್ಮೆ ಆಟದಲ್ಲಿ ಮುಳುಗುವುದುಂಟು. ಅವರ ವಯೋಸಹಜ ಪ್ರವೃತ್ತಿಗೆ ಕಡಿವಾಣ ಹಾಕುವ ಪೋಷಕರೂ ನಮ್ಮಲ್ಲಿ ಇದ್ದಾರೆ.

ಇನ್ನು ಶಾಲೆಯಲ್ಲಿ ಒಂದನೇ ತರಗತಿಗೇ ಪಠ್ಯಪುಸ್ತಕದ ಹೊರೆಯನ್ನು ಬೆನ್ನಿಗೆ ಹೇರಿಕೊಂಡು, ಸೇನೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಹೊರಟರೆಂದರೆ ಮನೆಗೆ ಹಿಂತಿರುಗುವುದು ಸಂಜೆಯೇ. ನಗರಪ್ರದೇಶಗಳಲ್ಲಿ ಅನೇಕ ಶಾಲೆಗಳಿಗೆ ಆಡವಾಡಲು ಮೈದಾನವೂ ಕೂಡ ಇಲ್ಲ. ಅಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಬಂದಿಖಾನೆಯ ಅನುಭವ ಉಂಟಾಗಿ ಶಾಲೆಬಿಟ್ಟರೆ ಸಾಕೆನಿಸುತ್ತದೆ.

ಶಾಲೆಯಲ್ಲಿ ಶಿಕ್ಷಕರ ಶಿಸ್ತಿನ ನಡವಳಿಕೆಯಿಂದ ಬೇಸತ್ತು ತಾಯಿಯ ಪ್ರೀತಿಯ ನಿರೀಕ್ಷೆಯಲ್ಲಿ ಮನೆಗೆ ಬಂದಾಗ ನಿರಾಶೆ ಕಟ್ಟಿಟ್ಟಬುತ್ತಿ. ಮನೆಗೆ ಹಿಂತಿರುಗಿದ ಕೂಡಲೇ ಹೋಂವರ್ಕ್ ಮಾಡುವಂತೆ ತಾಯಿಯ ಬಲವಂತಕ್ಕೆ ಕಟ್ಟುಬಿದ್ದು ಹೋಂವರ್ಕ್ ಮಾಡುವಷ್ಟರಲ್ಲಿ ಕತ್ತಲು ಕವಿದು ರಾತ್ರಿಯಾಗಿರುತ್ತದೆ.

ಇನ್ನು ಮಗುವಿಗೆ ಆಟವಾಡಲು ಪುರುಸೊತ್ತು ಎಲ್ಲಿದೆ? ತಾಯಿಯ ಮಾತನ್ನು ಕೇಳದ ಮಗುವಿಗೆ ನಾಲ್ಕೈದು ಪೆಟ್ಟುಗಳು ಬಿದ್ದು ಅಳುತ್ತಾ ಕೂಡುವುದು ಮಾಮೂಲಿ ಪ್ರಕ್ರಿಯೆಯಾಗಿದೆ.ಬಾಲ್ಯಾವಸ್ಥೆಯಲ್ಲಿ ಆಟವಾಡಿಕೊಂಡು ನಲಿಯಬೇಕಾದ ಮಕ್ಕಳನ್ನು ಅತಿಯಾದ ಶಿಸ್ತಿಗೆ ಒಳಪಡಿಸಿರುವುದರ ಪರಿಣಾಮವೇನಾಗಿದೆ?

ಮಕ್ಕಳ ಮುಖದಲ್ಲಿ ಬಾಲ್ಯಸಹಜ ಮುಗ್ಧತೆ ಮಾಯವಾಗಿದೆ. ಮುಗ್ಧತೆ, ಮಂದಹಾಸದ ಬದಲಿಗೆ ದುಗುಡ, ಆತಂಕ ಆವರಿಸಿದೆ. ಮಕ್ಕಳನ್ನು ಭವಿಷ್ಯದ ಕುಡಿಗಳಾಗಿ ಬೆಳೆಸಬೇಕಾದ ಪೋಷಕರೇ ಅವರ ಬಾಲ್ಯವನ್ನು ಹೊಸಕಿಹಾಕುವುದು ಎಷ್ಟರಮಟ್ಟಿಗೆ ನ್ಯಾಯ ಎಂದು ಈಗ ಕೇಳುವಂತಾಗಿದೆ.

ಬಾಲಕಾರ್ಮಿಕತನ:

ಕೇಂದ್ರ ಸರ್ಕಾರವು ಬಾಲ ಕಾರ್ಮಿಕ ಪದ್ಧತಿಗೆ ನಿಷೇಧ ಹೇರಿದೆ. ಕಾರ್ಖಾನೆಗಳಲ್ಲಿ , ಅಪಾಯಕಾರಿ ಉದ್ದಿಮೆಗಳಲ್ಲಿ, ಹೊಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳನ್ನು ದುಡಿಸಿಕೊಳ್ಳದಂತೆ ನಿಷೇಧ ವಿಧಿಸಿದೆ. ಆದರೆ ಅದರ ಯಶಸ್ಸು ಮಾತ್ರ ಶೂನ್ಯ. ಇಂದಿಗೂ ಮಕ್ಕಳು ಹೊಟೆಲುಗಳಲ್ಲಿ, ಇತರರ ಮನೆಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವುದು ಸರ್ವೆಸಾಮಾನ್ಯ ವಿದ್ಯಮಾನವಾಗಿದೆ.

"ಸುಮಾರು 10 ದಶಲಕ್ಷ ಮಕ್ಕಳು ಬಾಲಕಾರ್ಮಿಕತನದ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಅನೇಕ ಮಂದಿ ಬಾಲಕಿಯರು ಗುಪ್ತರೀತಿಗಳ ಶೋಷಣೆಗೆ ಸಿಕ್ಕಿ, ಅನಾರೋಗ್ಯ, ರೋಗರುಜಿನ, ಚಿತ್ರಹಿಂಸೆಗೆ ಗುರಿಯಾಗಿದ್ದಾರೆ" ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಲಕ್ಷಾಂತರ ಮಕ್ಕಳು ತಮ್ಮ ಕುಟುಂಬಗಳಿಂದ ಹೊರಗೆ ಇತರರ ಮನೆಕೆಲಸಗಳಲ್ಲಿ ರಾತ್ರಿಹಗಲೆನ್ನದೇ ಬೆವರುಹರಿಸುತ್ತಿದ್ದಾರೆ. ಅಪಾಯಕಾರಿ ಕೆಲಸಗಳಿಗೆ, ದೌರ್ಜನ್ಯಗಳಿಗೆ ಮತ್ತು ಶೋಷಣೆಗೆ ಗುರಿಯಾಗಿದ್ದಾರೆ ಎಂದು ವರದಿ ಹೇಳಿದೆ. ಕುಟುಂಬದ ಬಡತನ, ಮನೆಗೆಲಸದ ಅಪಾಯಗಳ ಬಗ್ಗೆ ಅಜ್ಞಾನ, ಏಡ್ಸ್‌ ಕಾಯಿಲೆಯಿಂದ ನಿರ್ಗತಿಕರಾದ ಮಕ್ಕಳು ಎಲ್ಲವೂ ಮಕ್ಕಳನ್ನು ಬಾಲಕಾರ್ಮಿಕತನಕ್ಕೆ ದೂಡುತ್ತಿದೆ.

ಮಕ್ಕಳ ವೇಶ್ಯಾವಾಟಿಕೆ

ಕುಟುಂಬದಲ್ಲಿ ಬಡತನ, ಹಣದ ಆಮಿಷಗಳು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದೆ. ಲಕ್ಷಾಂತರ ನಿರ್ಭಾಗ್ಯ ಮಕ್ಕಳು ಇಂದು ಮಾರಾಟದ ಸರಕಾಗಿ, ಭವಿಷ್ಯದ ಕನಸನ್ನು ಕಳೆದುಕೊಂಡು, ಗೊತ್ತುಗುರಿಯಿಲ್ಲದ ಜೀವನ ಸಾಗಿಸುತ್ತಿರುವುದು ಮಕ್ಕಳ ಬಗ್ಗೆ ವಹಿಸಿರುವ ಅನಾಸ್ಥೆಗೆ, ಅನಾದರಕ್ಕೆ ಸಾಕ್ಷಿಯಾಗಿ ನಿಂತಿದೆ. ವೇಶ್ಯಾವಾಟಿಕೆಯು ಮಕ್ಕಳ ಮನಸ್ಸಿನ ಮೇಲೆ ಘೋರ, ದೀರ್ಘಾವಧಿಯ ಆಘಾತ ಉಂಟುಮಾಡುತ್ತದೆ.

ಮಕ್ಕಳು ಅನುಭವಿಸುವ ದೈಹಿಕ, ಮಾನಸಿಕ ಹಿಂಸೆಗಳು ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅವು ಮಾದಕಪದಾರ್ಥಗಳ ಚಟಕ್ಕೆ ಬಲಿಯಾಗುತ್ತವೆ. ಮಾನಸಿಕ ಖಿನ್ನತೆಯಿಂದ ಬಳಲುತ್ತವೆ. ಭವಿಷ್ಯದ ಕುಡಿಗಳ ಜೀವನವನ್ನು ಬಾಲ್ಯದಲ್ಲೇ ಹೊಸಕಿಹಾಕುವ ನಾವು ಆಚರಿಸುವ ಮಕ್ಕಳ ದಿನಾಚರಣೆ ಎಷ್ಟರ ಮಟ್ಟಿಗೆ ಯೋಗ್ಯವೆನಿಸಿದೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಮಕ್ಕಳ ಜೀವನಕ್ಕೆ ಒಂದು ಅರ್ಥ ಕಲ್ಪಿಸಿ ಅವರ ಬಾಳು ಹಸನಾದಾಗಲೇ ಇಂತಹ ಮಕ್ಕಳ ದಿನಾಚರಣೆ ಅರ್ಥಪೂರ್ಣವೆನಿಸುತ್ತದೆ.
ಮತ್ತಷ್ಟು
ನಾಯಿಗೆ ಕೂಡಿಬಂದ ಕಂಕಣಭಾಗ್ಯ!!
ಗ್ರಾಮ ವಾಸ್ತವ್ಯ ಮುಂದುವರಿಕೆ, ಗ್ರಾಮ ದರ್ಶನಕ್ಕೆ ಸೂಚನೆ
ಬೂಕನಕೆರೆ ಹುಡುಗ ಮುಖ್ಯಮಂತ್ರಿ ಗದ್ದುಗೆಯೆಡೆಗೆ ನಡಿಗೆ