ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ  Search similar articles
ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸರಕಾರದ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಆದರೆ ಇದು ಒಂದು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಇಲ್ಲಿ ಅಮೆರಿಕವಿದೆ, ಭಾರತವಿದೆ, ಇದರೊಂದಿಗೆ ಇರಾನ್ ಕೂಡ ಇದೆ. ಅದು ಹೇಗೆ ಅಂತ ತಿಳಿಯಬೇಕಿದ್ದರೆ ಒಂದಿಷ್ಟು ಹಿನ್ನೋಟ ಹರಿಸಬೇಕು.

ಕೇಂದ್ರದಲ್ಲಿ ಎಡ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ 2004ರಲ್ಲಿ ಸರಕಾರ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವಾಗಲೀ ಯುಪಿಎಗಾಗಲೀ ಅಮೆರಿಕದ ಅಣು ಒಪ್ಪಂದದ ಬಗ್ಗೆ ಅಂತಹಾ ಗಂಭೀರ ಯೋಚನೆಯೇನೂ ಇರಲಿಲ್ಲ. ಆದ್ದರಿಂದಲೇ ಏನೋ, ಸರಕಾರದ ರಚನೆಗೆ ಬೇಕಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿಯಲ್ಲಿ ಅಮೆರಿಕದೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವೃದ್ದಿಗೆ ಸಂಬಂಧ ಪಟ್ಟಂತೆ ಉಲ್ಲೇಖಿಸಲಾಗಿತ್ತು. ಆದರೆ ಅಣು ಬಂಧದ ಸ್ಪಷ್ಟ ಚಿತ್ರಣ ಇರಲಿಲ್ಲ. ಹಾಗಿದ್ದರೆ ಅಮೆರಿಕ ಹೇಗೆ ತಾನಾಗಿ ಮುಂದೆ ಬರಲು ಸಾಧ್ಯವಾಯಿತು?

ಮಧ್ಯ ಪ್ರಾಚ್ಯದ ಮೇಲೆ ಪ್ರಾರಂಭದಿಂದಲೂ ಹಿಡಿತ ಸಾಧಿಸಲು ಅಮೆರಿಕ ಯತ್ನಿಸುತ್ತಿದೆ. ಆದರೆ ಈ ವಿಚಾರದಲ್ಲಿ ತೈಲ ಸಂಪದ್ಭರಿತ ರಾಷ್ಟ್ರಗಳಾದ ಇರಾನ್, ಇರಾಕ್‌ಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಅದಕ್ಕೆ ಇಂದಿನವರೆಗೂ ಸಾಧ್ಯವಾಗಿಲ್ಲ. ಅದೇ ಭಾರತ ಮಾತ್ರ ಸದ್ದಾಂ ಹುಸೇನ್ ಇದ್ದಾಗಲೂ ಕೂಡ ತನ್ನ ತೈಲ ಬೇಡಿಕೆಯನ್ನು ಸುಗಮವಾಗಿ ಪೂರೈಸಿಕೊಳ್ಳುತ್ತಿತ್ತು. ಇಸ್ಲಾಮಿಕ್ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಒಂದನ್ನು ಹೊರತುಪಡಿಸಿದರೆ ಉಳಿದ ಎಲ್ಲ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯವಿರಲಿ ಬಹುಪಕ್ಷೀಯವಿರಲಿ... ಸಂಬಂಧಗಳು ಸೌಹಾರ್ದಯುತವಾಗಿಯೇ ಇವೆ. ಈ ರೀತಿಯ ಸೌಹಾರ್ದಯುತ ಸಂಬಂಧಕ್ಕೂ ಹಲವಾರು ಕಾರಣಗಳು ಇವೆ. ಮೊದಲನೆಯದಾಗಿ ಅರಬ್ ರಾಷ್ಟ್ರಗಳಲ್ಲಿನ ಮಾನವ ಸಂಪನ್ಮೂಲದ ಕೊರತೆ ನೀಗುತ್ತಿರುವುದು ಭಾರತೀಯರಿಂದ. ಮತ್ತು ಆಹಾರ ಹಾಗೂ ಇತರ ಉತ್ಪನ್ನಗಳು ಭಾರತದಿಂದ ರಪ್ತು ಆಗಬೇಕು. ವಾಣಿಜ್ಯ ಮತ್ತು ವ್ಯವಹಾರದ ದೃಷ್ಟಿಯಿಂದ ಭಾರತ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಸಂಬಂಧ ಸುಮಧುರವಾಗಿದೆ.

ಯಾವಾಗ ಇರಾನ್-ಪಾಕಿಸ್ತಾನ-ಭಾರತ (ಐಪಿಐ) ನಡುವಿನ ಅನಿಲ ಕೊಳವೆ ಪೂರೈಕೆ ಮಾರ್ಗದ ಮಾತುಕತೆಗಳು ಪೂರ್ಣಗೊಂಡು ಜಾರಿಯಾಗುವ ಸಮಯ ಬಂದಿತೋ ಆಗಲೇ ಅಮೆರಿಕ ಭಾರತಕ್ಕೆ ದ್ವಿಪಕ್ಷೀಯ ನಾಗರಿಕ ಅಣು ಒಪ್ಪಂದದ ಪ್ರಸ್ತಾವ ಇಟ್ಟದ್ದು. ಒಂದು ವೇಳೆ ಐಪಿಐ ಯೋಜನೆ ಜಾರಿಗೆ ಬಂದಲ್ಲಿ ಅಮೆರಿಕದ ಬದ್ಧ ವೈರಿ ಇರಾನ್‌ನ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳವಾಗುವುದು ಖಂಡಿತ. ಪಾಕಿಸ್ತಾನ ಅಷ್ಟೋ ಇಷ್ಟೋ ಪ್ರಮಾಣದಲ್ಲಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡಿದರೂ ಭಾರತಕ್ಕೆ ಮಾತ್ರ ಆಗಾಧ ಪ್ರಮಾಣದಲ್ಲಿ ಶಕ್ತಿ ಸಂಪನ್ಮೂಲ ಬೇಕು. ಈ ನಿಟ್ಟಿನಲ್ಲಿ ಐಪಿಐ ಖಂಡಿತವಾಗಿ ಭಾರತದ ಶಕ್ತಿ ಸಂಪನ್ಮೂಲದ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸುವ ಸಾಧ್ಯತೆ ಇದೆ. ಇದೇ ವಿಚಾರ ಅಮೆರಿಕವನ್ನು ಆತಂಕಕ್ಕೆ ದೂಡಿತು. ಯೋಜನೆ ಪೂರ್ಣಗೊಂಡು ಅತ್ತ ಇರಾನ್‌ಗೆ ಇತರ ದೇಶಗಳತ್ತ ಕಣ್ಣು ಹಾಯಿಸಿಯೂ ನೋಡದಂತ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಆದ್ದರಿಂದಲೇ ಇರಾನ್‌ಗೆ ಯೋಜನೆಯ ಲಾಭ ದೊರೆಯಕೂಡದು ಮತ್ತು ಹೇಗಾದರೂ ಮಾಡಿ ಇರಾನ್‌ನ ಪ್ರಮುಖ ಗ್ರಾಹಕವಾಗಲಿರುವ ಭಾರತವನ್ನು ತಡೆಯಬೇಕು ಎಂದಾದಲ್ಲಿ ಭಾರತಕ್ಕೆ ಅಣು ಶಕ್ತಿ ಇಂಧನದ ಪೂರೈಕೆಯಾಗುವಂತೆ ಮಾಡಬೇಕು.

ಆದರೆ ಭಾರತ ಅಂತಾರಾಷ್ಟ್ರೀಯ ಮಟ್ಟದ ಅಣ್ವಸ್ತ್ರ ಪ್ರಸರಣ ಮತ್ತು ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದಕ್ಕೂ ಸಹಿ ಹಾಕಿಲ್ಲ. ಮತ್ತು ಸಹಿ ಹಾಕುವುದೂ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಭಾರತ ಮತ್ತು ಇರಾನ್ ನಡುವೆ ಜಾರಿಗೆ ಬರಲಿರುವ ನೈಸರ್ಗಿಕ ಅನಿಲ ಪೂರೈಕೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂಬ ಉದ್ದೇಶದಿಂದ ಅಣು ಒಪ್ಪಂದದ ಪ್ರಸ್ತಾವ ಇಡುವುದರ ಜೊತೆಗೆ ಅಮೆರಿಕವು ಕಜಕ್ ಸ್ಥಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ಇಂಡಿಯಾ (ಕಾಪಿ ) ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಯೋಜನೆಗೆ ಹಣಕಾಸು ನೆರವು ನೀಡುವುದಾಗಿ ಪ್ರಕಟಿಸಿದೆ. ಒಟ್ಟಾರೆ ಇರಾನ್ ಮೇಲೆ ನಿಯಂತ್ರಣ ಸಾಧಿಸಬೇಕು ಎನ್ನುವ ಅಮೆರಿಕದ ಒಂದೇ ಉದ್ದೇಶದ ಫಲವಾಗಿ ಭಾರತಕ್ಕೆ ಅಣು ಒಪ್ಪಂದ ಪ್ರಸ್ತಾವ ದೊರೆತಿದೆ ಎಂದರೂ ತಪ್ಪಾಗಲಾರದು.
ಮತ್ತಷ್ಟು
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!
ನೀವು ಪ್ರಧಾನಿಯಾದರೆ?....
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  
ವೆಬ್‌ದುನಿಯಾ ಬದಲಾಗಿದೆ...