ಭಯೋತ್ಪಾದನೆ, ಅಕ್ರಮ ಆಯುಧ, ಬಾಂಬ್. ಶಸ್ತ್ರಾಸ್ತ್ರ ರವಾನೆ ಇತ್ಯಾದಿ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚಾಗುತ್ತಿದೆ. ಭದ್ರತಾ ಪಡೆಗಳಿಗೆ ಉಗ್ರಗಾಮಿಗಳನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಿನ ಸಂಗತಿ. ಹೀಗಾಗಿ ಇಂಗ್ಲೆಂಡ್ ವಿಜ್ಞಾನಿಗಳೊಂದು ಕ್ರಾಂತಿಕಾರಕ ಸಾಧನವೊಂದನ್ನು ಕಂಡುಹುಡುಕಿದ್ದಾರೆ... ಅದೇನು ಮಾಡುತ್ತದೆ ಗೊತ್ತೇ?
ಉಸಿರು ಬಿಗಿ ಹಿಡಿದುಕೊಳ್ಳಿ... ಇದೊಂದು ಕ್ಯಾಮರಾ. 80 ಅಡಿ ದೂರದಿಂದ ಈ ಕ್ಯಾಮರಾ ಮೂಲಕ ನೋಡಿದರೆ ಉಟ್ಟ ಬಟ್ಟೆಯೊಳಗೆ ಏನೇನಿದೆ ಎಂಬುದೆಲ್ಲಾ ಕಾಣಿಸುತ್ತದೆಯಂತೆ!
ಹೌದು. ಇದು ಪಡ್ಡೆಗಳಿಗೆ ರೋಮಾಂಚಕಾರಿ ಸಂಗತಿಯಾದರೂ... ಬಾಂಬ್ ಸ್ಫೋಟ, ಹಾಡಹಗಲೇ ಗುಂಡಿನ ದಾಳಿ, ವಿಮಾನ ಅಪಹರಣ ಮುಂತಾದ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವೂ ಹೌದು ಎಂಬುದನ್ನು ವಿಜ್ಞಾನಿಗಳೇ ಒಪ್ಪುತ್ತಾರೆ.
ಆಕ್ಸ್‌ಫರ್ಡ್‌ಶೈರ್‌ನ ಥ್ರೂವಿಷನ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ತಂತ್ರಜ್ಞಾನವನ್ನು ಬ್ರಿಟಿಷ್ ಸರಕಾರದ ಪ್ರಧಾನ ಭೌತಸಂಶೋಧನಾ ಕೇಂದ್ರಗಳಲ್ಲೊಂದಾಗಿರುವ ರುಥ್‌ಫರ್ಡ್ ಆಪಲ್‌ಟನ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ದಿ ಸಂಡೇ ಟೈಮ್ಸ್ ವರದಿ ಮಾಡಿದೆ.
ಹಾಂ... ಸ್ವಲ್ಪ ತಾಳಿ... ಬಟ್ಟೆಯೊಳಗೆ ಏನನ್ನು ಇಟ್ಟುಕೊಂಡಿದ್ದೀರಿ ಅಂತ ಈ ಕ್ಯಾಮರಾ ನೋಡಬಲ್ಲುದಾಗಿದೆಯಾದರೂ, ಇದು ದೇಹದ ಅಂಗರಚನೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ತೋರಿಸುವುದಿಲ್ಲ ಅಂತ ವರದಿ ಸ್ಪಷ್ಟಪಡಿಸಿದೆ.
ಭಯೋತ್ಪಾದನಾ ಚಟುವಟಿಕೆಗಳು ಇಡೀ ವಿಶ್ವವನ್ನೇ ನಡುಗಿಸುತ್ತಿವೆ ಮತ್ತು ಜಾಗತಿಕವಾಗಿ ಭದ್ರತೆಯನ್ನೂ ಹೆಚ್ಚಿಸಲಾಗುತ್ತಿದೆ. ಟಿ5000 ಹೆಸರಿನ ಈ ಕ್ಯಾಮರಾವು ಬಹಳ ದೂರದಿಂದಲೇ ಜನರನ್ನು ಸ್ಕ್ಯಾನ್ ಮಾಡಿ ನೋಡಬಹುದಾಗಿದೆ ಎಂದು ಥ್ರೂವಿಶನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ಲೈವ್ ಬೀಟ್ಲೀ ಅವರು ತಿಳಿಸಿದ್ದಾರೆ. ಬಕಿಂಗ್‌ಹ್ಯಾಮ್‌ಶೈರಿನ ರಾಯಲ್ ಏರ್‌ಫೋರ್ಸ್ ನೆಲೆಯಲ್ಲಿ ಈ ವಾರ ಗೃಹ ಕಚೇರಿ ವೈಜ್ಞಾನಿಕ ಅಭಿವೃದ್ಧಿ ಇಲಾಖೆಯ ವತಿಯಿಂದ ನಡೆಯುವ ವಸ್ತುಪ್ರದರ್ಶನದಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ.
ಈ ಟಿ5000 ಕ್ಯಾಮರಾವನ್ನು ರೈಲ್ವೇ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಶಾಪಿಂಗ್ ಸೆಂಟರ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಬಹುದಾಗಿದೆ. ಈ ಉಪಕರಣ ಈಗಾಗಲೇ ಪೊಲೀಸ್ ಪಡೆಗಳು, ರೈಲ್ವೇ ಕಂಪನಿಗಳು ಮತ್ತು ವಿಮಾನ ಕಂಪನಿಗಳಲ್ಲಿ ಹಾಗೂ ಸರಕಾರಿ ಏಜೆನ್ಸಿಗಳಲ್ಲಿ ಆಸಕ್ತಿ ಮೂಡಿಸಿದ್ದು, ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.
|