ಭಾರತ ಅಮೆರಿಕ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದ 123 ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶುಕ್ರವಾರ ಸಹಿ ಹಾಕಿದ್ದು, ಈ ಮೂಲಕ ದ್ವಿಪಕ್ಷೀಯ ಪರಮಾಣು ಒಪ್ಪಂದವನ್ನು ಭಾರತ ಮತ್ತು ಅಮೆರಿಕ ಕಾರ್ಯರೂಪಕ್ಕಿಳಿಸಿದವು. ಇದೇ ಸಂದರ್ಭ, ಈ ಒಪ್ಪಂದಕ್ಕೆ ಉಭಯ ದೇಶಗಳಿಗೆ ಶಾಸನಾತ್ಮಕ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿರುವ ಭಾರತ, 123 ಒಪ್ಪಂದದನ್ವಯ ಸಮ್ಮತಿಸಿರುವ ಪಠ್ಯಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ. ಇದರೊಂದಿಗೆ 34 ವರ್ಷಗಳಿಂದ ಭಾರತವು ಅನುಭವಿಸುತ್ತಿದ್ದ 'ಪರಮಾಣು ಅಸ್ಪೃಶ್ಯತೆ' ಕಳಚಿಬಿದ್ದಂತಾಗಿದೆ.ವಿದೇಶಾಂಗ ಇಲಾಖೆಯ ಬೆಂಜಾಮಿನ್ ಫ್ರಾಂಕ್ಲಿನ್ ರೂಂನಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ಭಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ಅಮೆರಿಕ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಕಾಂಡೊಲೀಸಾ ರೈಸ್, ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಜುಲೈ 18, 2005ರಂದು ಜಂಟಿಯಾಗಿ ಅನುಮೋದಿಸಲ್ಪಟ್ಟ ಅಣು ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದರು.ಒಪ್ಪಂದಕ್ಕೆ ಸಂಬಂಧಿಸಿದ ಆಂತರಿಕ ಕಾರ್ಯವಿಧಾನಗಳು ಪೂರ್ಣಗೊಂಡಿದ್ದು, ಇದು ಸುಮಾರು ಮೂರು ದಶಕಗಳ ನಂತರ ಭಾರತೀಯ ಪರಮಾಣು ಮಾರುಕಟ್ಟೆಗೆ ಅಮೆರಿಕನ್ ಕಂಪನಿಗಳ ಪ್ರವೇಶಕ್ಕೆ ಹಾದಿ ಮಾಡಿಕೊಡಲಿದೆ ಎಂದು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಣಬ್ ಮುಖರ್ಜಿ ಹೇಳಿದರು.ಇಂದು ಭಾರತ ಮತ್ತು ಅಮೆರಿಕ ಸಂಬಂಧದಲ್ಲಿನ ಬಹು ಪ್ರಾಮುಖ್ಯವಾದ ದಿನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಅಣು ಒಪ್ಪಂದಕ್ಕೆ ಶಾಸನರೂಪ ನೀಡುವ ವಿಧೇಯಕಕ್ಕೆ ಬುಧವಾರ ಶ್ವೇತಭವನದಲ್ಲಿ ಅಂತಿಮ ಮುದ್ರೆ ಹಾಕಿದ್ದರು. |
|