ಒಂದು ಕಾಲದಲ್ಲಿ ಹಳ್ಳಿಗರು, ಪ್ರವಾಸಿಗರನ್ನು ಪ್ರತಿವರ್ಷ ಆಕರ್ಷಿಸುತ್ತಿದ್ದ ರಾಜಸ್ಥಾನದ "ಗಾರ್ದಭ ಉತ್ಸವ" ಈಗ ಅಷ್ಟೊಂದು ಆಕರ್ಷಣೀಯವಾಗಿ ಉಳಿದಿಲ್ಲ.
ಈ ಗಾರ್ದಭ ಉತ್ಸವದಲ್ಲಿ ಮಾರಾಟವಾಗುತ್ತಿರುವ ಕತ್ತೆಗಳ ಸಂಖ್ಯೆಯು ಸಾವಿರದಷ್ಟಿತ್ತು. ಇದೀಗ ಅದು ನೂರರ ಆಸುಪಾಸಿಗೆ ಇಳಿದಿದೆ. ಇದಕ್ಕೆಲ್ಲಾ ಆಧುನಿಕತೆಯೇ ಕಾರಣ ಎನ್ನುತ್ತಾರೆ ಸ್ಥಳೀಯರು.
ಜೈಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಕನೋಟಾದಲ್ಲಿ ನಡೆಯುವ ಈ ಕತ್ತೆಗಳ ಉತ್ಸವವು ಏಷ್ಯಾದಲ್ಲೇ ಅತಿ ದೊಡ್ಡದಾಗಿತ್ತು.
ನಮ್ಮ ಹಳೆಯ ಪ್ರಾಣಿಗಳನ್ನು ಇಲ್ಲಿಗೆ ತಂದು, ಹೊಸದನ್ನು ನಾವು ಒಯ್ಯುತ್ತಿದ್ದೆವು. ಆದರೆ ಈ ಬಾರಿ, ಕೇವಲ ಕೆಲವೇ ಪ್ರಾಣಿಗಳು ಮಾತ್ರವೇ ಇರುತ್ತವೆಂದು ಕಾಣಿಸುತ್ತದೆ. ಅದಕ್ಕಾಗಿ ನಾನು ನನ್ನ ಹಳೆಯ ಪ್ರಾಣಿಯನ್ನೇ ನೆಚ್ಚಿಕೊಳ್ಳಬೇಕಿದೆ ಎಂದು ಕತ್ತೆಯ ಮಾಲೀಕರಲ್ಲೊಬ್ಬನಾದ ಶಂಕರ್ ಲಾಲ್ ಹೇಳುತ್ತಾನೆ.
ಕತ್ತೆಗಳ ಜಾತ್ರೆಯಲ್ಲಿನ ಆಕರ್ಷಣೆಯ ಕೊರತೆಯಿಂದಾಗಿ ಜಾತ್ರೆಯ ಭವಿಷ್ಯವೇ ಡೋಲಾಯಮಾನವಾಗಿದೆ.
ಆಗ್ರಾ, ಮಾರ್ವಾಡ್, ಜೈಸಲ್ಮೇರ್, ಲಡಾಖ್ ಮತ್ತು ಕಾಶ್ಮೀರ ಮುಂತಾದೆಡೆಗಳಿಂದ ಕತ್ತೆಗಳಿಗೆ ಈ ಉತ್ಸವದಲ್ಲಿ ಭಾರಿ ಬೇಡಿಕೆ ಇರುತ್ತಿತ್ತು. ಆದರೆ ಈಗ ಖರೀದಿದಾರರ ಕೊರತೆಯಿಂದಾಗಿ ಇದು ಕೇವಲ ಒಂದು ಹಳ್ಳಿಗಷ್ಟೇ ಸೀಮಿತವಾದ ಉತ್ಸವವಾಗಿಬಿಟ್ಟಿದೆ.
ಹಿಂದೆ ಇದೇ ಕತ್ತೆ ಮೇಳದಲ್ಲಿ ಕತ್ತೆ ಮಾರಿದ್ದ ಬಾಬುಲಾಲ್ ಏನು ಹೇಳುತ್ತಾನೆ ಗೊತ್ತೇ? "ಈಗ ಯಾರು ಕತ್ತೆಗಳನ್ನು ಉಪಯೋಗಿಸುತ್ತಾರೆ? ನಾನಂತೂ ಕುದುರೆ ಖರೀದಿಸಿದ್ದೇನೆ. ಯಾರು ಕೂಡ ಕತ್ತೆಗಳನ್ನು ಇಷ್ಟಪಡುವುದಿಲ್ಲ. ಅವರಿಗೆ ಇರಿಸುಮುರಿಸು" ಅನ್ನುತ್ತಾನಾತ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಗ್ರಾಮೀಣ ಭಾರತದಲ್ಲಿ ಭಾರ ಒಯ್ಯಲು ಅತ್ಯಂತ ಸೂಕ್ತ ವಾಹನವಾಗಿ ಕತ್ತೆ ಪರಿಗಣಿಸಲ್ಪಟ್ಟಿತ್ತು. ಇದೀಗ ಉತ್ತಮ ರಸ್ತೆಗಳು, ಉತ್ತಮ ಸಾರಿಗೆ ವ್ಯವಸ್ಥೆ ಇತ್ಯಾದಿಗಳಿಂದಾಗಿ ಕತ್ತೆಗಳಿಗೆ ಕೇಳುವವರಿಲ್ಲ ಎಂಬಂತ ಪರಿಸ್ಥಿತಿ.
ಸುತ್ತಮುತ್ತಲಿನ ಹೆಂಚು ಕಾರ್ಖಾನೆಗಳಲ್ಲೂ ಕತ್ತೆಗಳ ಬೇಡಿಕೆ ಕಡಿಮೆಯಾಗಿದೆ. ಅವರೀಗ ಟ್ರ್ಯಾಕ್ಟರ್‌ಗಳು ಅಥವಾ ಯಾವುದೇ ಇತರ ವಾಹನಗಳನ್ನು ಬಳಸುತ್ತಿದ್ದಾರೆ.
ಈ ಉತ್ಸವ ಆಕರ್ಷಣೆ ಕಳೆದುಕೊಂಡಿದ್ದರೂ, ಹೆಚ್ಚು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ವಿಧಾನಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಅತಿ ಹೆಚ್ಚು ಕತ್ತೆಗಳನ್ನು ತಂದವರಿಗೆ ಅಥವಾ ಉತ್ತಮ ತಳಿಯ ಕತ್ತೆಯನ್ನು ಇಲ್ಲಿಗೆ ತಂದವರಿಗೆ ಬಹುಮಾನ ನೀಡಲಾಗುತ್ತದೆ. ಇದೂ ಅಲ್ಲದೆ, ಕತ್ತೆ ರೇಸ್ ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಮಂಗಗಳು ಹಾಗೂ ಕುದುರೆಗಳಿಗೂ ಅವಕಾಶ ನೀಡಲಾಗುತ್ತಿದೆ.
ಗೆದ್ದ ಕತ್ತೆ ಅಥವಾ ಕುದುರೆಯ ಮಾಲೀಕನಿಗೆ ದೊರೆಯುವ ಬಹುಮಾನದ ಮೊತ್ತ 500ರಿಂದ 10 ಸಾವಿರ ರೂ.ವರೆಗೆ ಇರುತ್ತದೆ.
ಕತ್ತೆಗಳಿಗೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಜಾತ್ರೆಗೆ ಸಾಕಷ್ಟು ಕುದುರೆಗಳನ್ನೂ ಕರೆತಂದು ಮಾರಾಟ ಮಾಡಲಾಗುತ್ತದೆ.
ಕುದುರೆಗಳನ್ನು ಸೇನಾಪಡೆ ಮತ್ತು ಅರೆಸೇನಾ ಪಡೆಗಳವರು ಖರೀದಿಸುತ್ತಾರೆ. ಫಾರ್ಮ್ ಹೌಸ್‌ಗಳಲ್ಲೂ ಇವುಗಳಿಗೆ ಬೇಡಿಕೆ ಇದೆ.
ಖಲ್ಖಾನಿ ದೇವಿಯ ಗೌರವಾರ್ಥವಾಗಿಯೂ ಈ ಜಾತ್ರೆ ಏರ್ಪಡಿಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಜನಪದದ ಪ್ರಕಾರ, ತೀರಾ ಸಂಕಷ್ಟದಲ್ಲಿದ್ದ ರಾಣಿಯೊಬ್ಬಳನ್ನು ಚಂದಾ ಮೀನಾ ಎಂಬ ಶೂರ ಜಮೀನುದಾರ ರಕ್ಷಿಸಿದ್ದ. ಆಕೆ, ಆತನನ್ನು ಸಹೋದರನಾಗಿ ಸ್ವೀಕರಿಸಿದಳು. ಈ ರಾಣಿಗೆ ಮಲಯ್ ಸಿಂಗ್ ಎಂಬ ಕುಖ್ಯಾತ ಮಗನೊಬ್ಬನಿದ್ದ.
ಅವನಿಗೆ ಚಂದಾ ಮೀನಾ ಪಾಠ ಕಲಿಸಲು ಯೋಚಿಸಿದ. ಒಂದು ಚೀಲ ತುಂಬಾ ಚಿನ್ನದ ನಾಣ್ಯಗಳಿರುವ ಚೀಲವನ್ನು ಹೊತ್ತ ಕತ್ತೆಯೊಂದನ್ನು ದೆಹಲಿಯ ರಾಜನಿಗೆ ನೀಡಲು ತರುವಂತೆ ಹೇಳುತ್ತಾನೆ. ಅವನು ಖಲ್ಖಾನಿ ದೇವಿ ಮಂದಿರಕ್ಕೆ ತಲುಪಿದಾಗ, ಅವನಲ್ಲಿ ದುರಾಸೆ ಹೆಚ್ಚಾಯಿತು. ಅವನು ಆ ಚೀಲವನ್ನು ತೆರೆದೇ ಬಿಟ್ಟ. ನೋಡಿದ. ಅದರಲ್ಲಿ ಚಿನ್ನದ ನಾಣ್ಯದ ಬದಲು ಕಲ್ಲುಗಳಿದ್ದವು!
ಕಳವಳಗೊಂಡ ಮಲಯ್ ಸಿಂಗ್, ನಾಣ್ಯ ನಾಪತ್ತೆಯಾಗಿದ್ದಕ್ಕೆ ತನ್ನನ್ನೇ ಹೊಣೆಯಾಗಿಸುತ್ತಾರೆ ಎಂದು ಹೆದರಿ, ಮಂದಿರದಲ್ಲಿ ದೇವಿಯನ್ನು ಪ್ರಾರ್ಥಿಸಿದ. ಈ ಕಲ್ಲುಗಳು ಮತ್ತೆ ಚಿನ್ನದ ನಾಣ್ಯಗಳಾಗಿ ಪರಿವರ್ತನೆಗೊಂಡವು. ಅಂದಿನಿಂದ ಈ ಪವಾಡದ ಸ್ಮರಣೆಗಾಗಿ ಕತ್ತೆಗಳ ಉತ್ಸವ ಆಚರಿಸಲಾಗುತ್ತದೆ ಎಂಬ ದಂತಕಥೆಯೊಂದು ಇಲ್ಲಿ ಚಾಲ್ತಿಯಲ್ಲಿದೆ.
|