ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಈ ಪುಟಾಣಿ ಬಳಿ 40000 ಅಪರೂಪದ ನಾಣ್ಯಗಳು
ಒಂದು ಸಾಮಾನ್ಯ ಹವ್ಯಾಸವು ಇಡೀ ಜೀವನವನ್ನು ಸಂಭ್ರಮಿಸಲು ಹೇಗೆ ಸಾಧ್ಯವಾಗಬಹುದು ಎಂಬುದನ್ನು ಒರಿಸ್ಸಾದ 13 ವರ್ಷದ ಹುಡುಗನೊಬ್ಬ ತೋರಿಸಿಕೊಟ್ಟಿದ್ದಾನೆ. ನಾಣ್ಯ ಸಂಗ್ರಹಣೆಯ ತನ್ನ ಹವ್ಯಾಸವನ್ನು ಮುಂದುವರಿಸಿ ಆತ ಈಗಾಗಲೇ 40 ಸಾವಿರ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಒಡೆಯನಾಗಿದ್ದಾನೆ!

ದೇವಿ ಪ್ರಸಾದ್ ಮಂಗರಾಜ್ ಈಗ 130 ದೇಶದಳಿಗೆ ಸೇರಿದ ಅಪರೂಪದ ನಾಣ್ಯ-ನೋಟುಗಳ ಒಡೆಯ. ಇವುಗಳಲ್ಲಿ ಕೆಲವಂತೂ 800 ವರ್ಷಕ್ಕೂ ಹಳೆಯವು ಮತ್ತು ಯಾವುದೇ ವಸ್ತು ಸಂಗ್ರಹಾಲಯದಲ್ಲೂ ಇರಲಾರದಂತಹ ಅಪರೂಪದವುಗಳು.

ಶಿವಾಜಿ ಕಾಲದ ಚಿನ್ನದ ನಾಣ್ಯ ಮತ್ತು ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ ಕೆಲವು ನಾಣ್ಯಗಳೂ ನನ್ನ ಬಳಿ ಇವೆ ಎಂದಿದ್ದಾನೆ ದೇವಿಪ್ರಸಾದ್.

8ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ನಾಣ್ಯ ಸಂಗ್ರಹ ಆರಂಭಿಸಿದ್ದು ಯಾವಾಗ ಎಂದರೆ ಆತನ ಅಜ್ಜ, ಆರನೇ ಹುಟ್ಟು ಹಬ್ಬದ ಉಡುಗೊರೆಯಾಗಿ 15 ನಾಣ್ಯಗಳನ್ನು ನೀಡಿದಂದಿನಿಂದ.

ಈ ನಾಣ್ಯಗಳನ್ನು ನಾನು ನೋಡುತ್ತಿದ್ದೆ. ಆದರೆ ಅವುಗಳ ಬೆಲೆ ಏನೆಂಬುದು ತಿಳಿದಿರಲಿಲ್ಲ. ಅದೊಂದು ದಿನ ಒರಿಸ್ಸಾ ಮಾಜಿ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಅದನ್ನು ಒಯ್ದಾಗ, ಈ ನಾಣ್ಯಗಳ ಬಗ್ಗೆ ಅವರು ವಿವರಿಸಿದರು. ಅಂದಿನಿಂದ ಈ ಹವ್ಯಾಸ ಗಟ್ಟಿ ಮಾಡಿಕೊಂಡೆ ಎಂದಿದ್ದಾನೆ ದೇವಿಪ್ರಸಾದ್.

ಆಸ್ಟ್ರೇಲಿಯಾ, ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಮತ್ತು ಅಮೆರಿಕ ಮುಂತಾದ ರಾಷ್ಟ್ರಗಳ ನಾಣ್ಯಗಳು ಆತನ ಸಂಗ್ರಹದಲ್ಲಿವೆ. 1800ರ ಕಾಲದ ಈಸ್ಟ್ ಇಂಡಿಯಾ ಕಂಪನಿ ನಾಣ್ಯಗಳೂ, 18ನೇ ಶತಮಾನದ ಉತ್ತರ ಭಾಗದಲ್ಲಿದ್ದ ಪೆನ್ನಿಗಳು, 19ನೇ ಶತಮಾನದ ಮಧ್ಯ ಭಾಗದ ಪೆಸೋಗಳೂ ಆತನ ಬಳಿ ಇವೆ.

ಕಲ್ಲು, ಚಿನ್ನ ಮತ್ತು ಮಣ್ಣಿನ ನಾಣ್ಯಗಳೂ ಅವನ ಬಳಿ ಇದ್ದು, ಅದರಲ್ಲಿ ದೇವರು, ಪ್ರಾಣಿಗಳ ಚಿತ್ರಗಳಿವೆ. ಎಲ್ಲಾ ಅಪರೂಪದ ನಾಣ್ಯಗಳನ್ನು ಹೊಂದುವ ಮೂಲಕ ವಿಶ್ವದ ಶ್ರೇಷ್ಠ ನಾಣ್ಯ ಸಂಗ್ರಾಹಕನಾಗುವ ಇಚ್ಛೆ ವ್ಯಕ್ತಪಡಿಸಿರುವ ದೇವಿ ಪ್ರಸಾದ್, ನಾಣ್ಯಗಳಿಗಾಗಿಯೇ ವಿಶೇಷ ವಸ್ತು ಸಂಗ್ರಹಾಲಯ ತೆರೆಯಲು ಯೋಜಿಸಿದ್ದಾನೆ.

ಒರಿಸ್ಸಾ ರಾಜ್ಯಪಾಲ ಭವನದಲ್ಲಿ ಈಗಾಗಲೇ ನಾಣ್ಯ ಪ್ರದರ್ಶನ ಏರ್ಪಡಿಸಿರುವ ಈತ ಎಲ್ಲರ ಗಮನ ಸೆಳೆದಿದ್ದಾನೆ. ಈ ಪುಟಾಣಿ ಹುಡುಗನ ಹೆಸರು ಗಿನೆಸ್ ಪುಸ್ತಕದಲ್ಲಿ ದಾಖಲಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ರಾಜ್ಯಪಾಲ ಮುರಳೀಧರ ಚಂದ್ರಕಾಂತ ಭಂಡಾರಿ.

ಈ ಪುಟಾಣಿ ನಾಣ್ಯ ಸಂಗ್ರಾಹಕನಿಗೆ ನೆರವು ನೀಡಲು ಒರಿಸ್ಸಾ ಸರಕಾರ ಮುಂದೆ ಬಂದಿರುವುದರಿಂದ ಮ್ಯೂಸಿಯಂ ರಚಿಸುವ ಆತನ ಕನಸು ಕೈಗೂಡುವ ಸಾಧ್ಯತೆಗಳಿವೆ.

ಭಾರತದಲ್ಲಿ ಯಾರಲ್ಲೂ ಇಷ್ಟು ಪ್ರಮಾಣದಲ್ಲಿ ನಾಣ್ಯಗಳಿಲ್ಲ. ಪ್ರತಿ ವರ್ಷ ಇವನ ಸಂಗ್ರಹ ಹೆಚ್ಚುತ್ತಲೇ ಇದೆ. ಈ ಹವ್ಯಾಸವನ್ನು ಪೋಷಿಸಲು ಸರಕಾರ ನಿರ್ಧರಿಸಿದೆ. ನಾಣ್ಯದ ಗ್ಯಾಲರಿ ಸ್ಥಾಪನೆಗೆ ಆತನಿಗೆ ಭೂಮಿ ಒದಗಿಸುವ ನಿಟ್ಟಿನಲ್ಲಿ ಸರಕಾರ ಯೋಚಿಸುತ್ತಿದೆ ಎಂದು ರಾಜ್ಯ ವಸ್ತುಸಂಗ್ರಹಾಲಯ ವಿಭಾಗದ ಸೂಪರಿಂಟೆಂಡೆಂಟ್ ಚಂದ್ರಭಾನು ಪಟೇಲ್ ಹೇಳಿದ್ದು, ನಾಣ್ಯಗಳಿಗೇ ಮೀಸಲಾದ ಮ್ಯೂಸಿಯಂ ಸದ್ಯಕ್ಕೆ ಸ್ಪೇನ್ ದೇಶದಲ್ಲಿ ಮಾತ್ರವೇ ಇದೆ ಎಂದಿದ್ದಾರೆ.
ಮತ್ತಷ್ಟು
ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಸಭೆ
ನಂದಿಗ್ರಾಮ ಹಿಂಸಾಚಾರಕ್ಕೆ 2 ಬಲಿ
ದೀಪಾವಳಿಗೆ ಬಿಜೆಪಿ ಹೊಸ ಸರಕಾರ?
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು