ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" ಯಾರಿಗೆ ಕೊಡಬೇಕೆಂಬುದರ ಕುರಿತ ಶಿಫಾರಸು ಪಟ್ಟಿ ಬೆಳೆಯುತ್ತಲೇ ಇದೆ.
ಲೋಕಸಭೆಯ ವಿರೋಧ ಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ನೀಡಬೇಕು ಎಂದು ಹೇಳುವ ಮೂಲಕ ಚಾಲನೆ ಪಡೆದುಕೊಂಡ 'ಭಾರತ ರತ್ನ' ಶಿಫಾರಸು ಪಟ್ಟಿಗೆ ಹೊಸ ಸೇರ್ಪಡೆ ಭಗತ್ ಸಿಂಗ್. ಶಹೀದ್ ಭಗತ್ ಸಿಂಗ್ ಸೇವಾ ದಳವು ಈ ಹೆಸರು ಪ್ರಸ್ತಾಪಿಸಿದೆ.
ಭಾರತ ರತ್ನ ಪ್ರಶಸ್ತಿ ಪಡೆಯಲು ಅರ್ಹರು ಎಂಬುದರ ಕುರಿತು ಇದುವರೆಗೆ ಕೇಳಿಬಂದ ಹೆಸರುಗಳಲ್ಲಿ ಪ್ರಮುಖವಾದವುಗಳೆಂದರೆ ಮಾಜಿ ಪ್ರಧಾನಿಗಳಾದ ವಾಜಪೇಯಿ, ಚಂದ್ರಶೇಖರ್ ಮತ್ತು ಚರಣ್ ಸಿಂಗ್, ಬಿಎಸ್ಪಿ ಸಂಸ್ಥಾಪಕ ಕಾನ್ಶೀ ರಾಂ, ಸಿಪಿಎಂ ನಾಯಕ ಜ್ಯೋತಿ ಬಸು (ಸ್ವತಃ ನಿರಾಕರಿಸಿದ್ದಾರೆ), ಹಿರಿಯ ಸಮಾಜವಾದಿ ನಾಯಕ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಳೆ, ಮಾಜಿ ರಕ್ಷಣಾ ಸಚಿವ ಹಾಗೂ ದಲಿತ ಮುಖಂಡ ಜಗಜೀವನ್ ರಾಂ, ಹಿರಿಯ ಗಾಯಕ ಮಹಮದ್ ರಫಿ, ಕೊನೆಯ ಮೊಘಲ್ ಚಕ್ರವರ್ತಿ ಬಹಾದೂರ್ ಶಾ ಜಾಫರ್, ಡಿಎಂಕೆ ನಾಯಕ ಎಂ.ಕರುಣಾನಿಧಿ, ಮಾಜಿ ಗೃಹ ಸಚಿವ ಎಸ್.ಬಿ.ಚವಾಣ್ ಮತ್ತು ಮಾತಾ ಅಮೃತಾನಂದಮಯಿ.
ಅಲ್ಲದೆ, ಚಿತ್ರ ಕಲಾವಿದ ಎಂ.ಎಫ್.ಹುಸೇನ್‌ಗೂ ಭಾರತ ರತ್ನ ನೀಡಬೇಕೆಂಬ ಆಗ್ರಹವು ಭಾರೀ ಕೋಲಾಹಲಕ್ಕೇ ಕಾರಣವಾಗಿ, ಎನ್‌ಡಿಟಿವಿ ಕಚೇರಿಯಲ್ಲಿ ದಾಂಧಲೆ ನಡೆಸಲಾಗಿದೆ.
ತಮ್ಮ ತಮ್ಮ ಅಭ್ಯರ್ಥಿಗಳಿಗೆ ಭಾರತ ರತ್ನ ನೀಡಲು ಹಲವು ರಾಷ್ಟ್ರೀಯ ರಾಜಕೀಯ ಪಕ್ಷಗಳು ಒತ್ತಡ ಹೇರುತ್ತಿವೆ ಎಂದು ಶಹೀದ್ ಭಗತ್ ಸಿಂಗ್ ಸೇವಾ ದಳವು ಹೇಳಿಕೆಯೊಂದರಲ್ಲಿ ತಿಳಿಸಿದ್ದು, 'ಭಗತ್ ಸಿಂಗ್ ಅವರು 23ರ ಹರೆಯದಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು. ಅವರು ದೇಶಭಕ್ತಿಯ ಪ್ರತೀಕವಾಗಿದ್ದು, ದೇಶದ ಸಾವಿರಾರು ಯುವಜನತೆಗೆ ಪ್ರೇರಣೆಯೂ ಆಗಿದ್ದಾರೆ' ಎಂದು ತಿಳಿಸಿದೆ.
ಭಾರತ ರತ್ನ ಪ್ರಶಸ್ತಿಯನ್ನು 1954ರಿಂದ ನೀಡಲಾಗುತ್ತಿದೆ. ಮೊದಲ ಭಾರತ ರತ್ನ ಪ್ರಶಸ್ತಿ ಪಡೆದವರು ಪ್ರಖ್ಯಾತ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿ.ವಿ.ರಾಮನ್). ಕೊನೆಯ ಬಾರಿಗೆ ಈ ಪ್ರಶಸ್ತಿಯನ್ನು 2001ರಲ್ಲಿ ಗಾಯಕಿ ಲತಾ ದೀನಾನಾಥ್ ಮಂಗೇಶ್ಕರ್ ಮತ್ತು ಶಹನಾಯ್ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ನೀಡಲಾಗಿತ್ತು.
ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ (1997), ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೇಸಾ (ನಿಜ ಹೆಸರು ಆಗ್ನೆಸ್ ಗೋಂಕ್ಸಾ ಬೊಜಾಕ್ಸಿಯು-1980ರಲ್ಲಿ) ಹಾಗೂ ಇಬ್ಬರು ಭಾರತೀಯೇತರರಾದ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ನೆಲ್ಸನ್ ಮಂಡೇಲಾ (1990) ಅವರು ಈ ಪ್ರಶಸ್ತಿ ಪಡೆದ ಇತರ ಪ್ರಮುಖರು.
ಪ್ರತಿವರ್ಷವೂ ಭಾರತ ರತ್ನ ಪ್ರಶಸ್ತಿ ನೀಡುವುದು ಕಡ್ಡಾಯವಾಗಿದೆ.
|