'ಸೆಕ್ಸ್ ಡಾಕ್ಟರ್' ಎಂಬ ಕುಖ್ಯಾತಿಗೆ ಒಳಗಾಗಿದ್ದ ಚೆನ್ನೈನ ವೈದ್ಯ ಡಾ| ಪ್ರಕಾಶ್ ಎಂಬಾತನಿಗೆ ಶೀಘ್ರ ವಿಲೇವಾರಿ ನ್ಯಾಯಾಲಯ(ಎಫ್‌ಟಿಸಿ)ವೊಂದು ಜಿವಾವಧಿ ಶಿಕ್ಷೆ ವಿಧಿಸಿದೆ.
ತನ್ನ ಮಹಿಳಾ ರೋಗಿಗಳ ಅಶ್ಲೀಲ ಪೋಟೋಗಳನ್ನು ತೆಗೆದು ಅವುಗಳನ್ನು ವೆಬ್ ಮೂಲಕ ಪ್ರಕಟಿಸುತ್ತಿದ್ದ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವೈದ್ಯ ಪ್ರಕಾಶ್ ಹಾಗೂ ಇತರ ಮೂವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಗಿದ್ದು, ಮಿಕ್ಕವರಿಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 367 ಮತ್ತು 120-ಬಿ ಪ್ರಕಾರ ಈ ನಾಲ್ವರನ್ನು ತಪ್ಪಿತಸ್ಥರು ಎಂಬುದಾಗಿ ಎಫ್‌ಟಿಸಿ ನ್ಯಾಯಾಧೀಶೆ ಆರ್.ರಾಧ ಬುಧವಾರ ತೀರ್ಪು ನೀಡಿದ್ದರು.
ಅದಾಗ್ಯೂ, ವೈದ್ಯನ ಮೇಲಿದ್ದ ಹತ್ಯಾಯತ್ನ ಮತ್ತು ಅತ್ಯಾಚಾರ ಆರೋಪವನ್ನು ನ್ಯಾಯಾಧೀಶರು ಕೈಬಿಟ್ಟಿದ್ದಾರೆ. ಅಲ್ಲದೆ ಪ್ರಕರಣದ ಇನ್ನೋರ್ವ ಆರೋಪಿ ನಿಕ್ಸನ್ ಎಂಬಾತನನ್ನು ದೋಷಮುಕ್ತಗೊಳಿಸಲಾಗಿದೆ.
ಮೂಳೆ ತಜ್ಞನಾಗಿರುವ ಡಾ| ಪ್ರಕಾಶ್ 2001ರ ಡಿಸೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ. ರಹಸ್ಯ ಕ್ಯಾಮರಾಗಳ ಮೂಲಕ ತನ್ನ ಮಹಿಳಾ ರೋಗಿಗಳ ಅಶ್ಲೀಲ ಪೋಟೋ ತೆಗೆದು, ಬಳಿಕ ಅದನ್ನು ಆತ ತನ್ನ ಅಮೆರಿಕ ಮೂಲದ ಸಹೋದರನ ಸಹಾಯದೊಂದಿಗೆ ವೆಬ್‌ಸೈಟ್‌ಗಳ ಮೂಲಕ ಬಿತ್ತರಿಸುತ್ತಿದ್ದ ಎಂದು ಆರೋಪಿಸಲಾಗಿದೆ.
|