'ಸದನದ ನಿಯಮಾವಳಿ ಪುಸ್ತಕವನ್ನು ಗಾಂಧೀಜಿ ಪ್ರತಿಮೆ ಎದುರು ಹೋಗಿ ಸುಟ್ಟು ಹಾಕಿ'...
ಸಂಸತ್ತಿನಲ್ಲಿ ಸಂಸದರ ಗದ್ದಲದಿಂದ ತೀರಾ ಹತಾಶರಾದ ಸ್ಪೀಕರ್ ಸೋಮನಾಥ ಚಟರ್ಜಿ ಹೀಗಂತ ಗುಡುಗಿದ್ದಾರೆ.
ಗುರುವಾರ ಕಲಾಪ ನಡೆಯುತ್ತಿದ್ದಾಗ ಸದಸ್ಯರು ವಾದ-ಪ್ರತಿವಾದ ಮಾಡುತ್ತಾ, ಗದ್ದಲವೆಬ್ಬಿಸಿ ತಮ್ಮ ಮಾತು ಗಟ್ಟಿಯಾಗಿ ಕೇಳಿಸಿಕೊಳ್ಳುವಂತೆ ಅರಚಾಡುತ್ತಿದ್ದಾಗ ತಾಳ್ಮೆ ಕಳೆದುಕೊಂಡ ಚಟರ್ಜಿ, 'ಯಾರ್ಯಾರೋ ಏನೇನೋ ಹೇಳುತ್ತಿದ್ದಾರೆ... ನನ್ನ ಮಾತನ್ನು ಯಾರು ಕೇಳುತ್ತಾರೆ? ಏನು ಮಾಡುವುದು' ಅಂತ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಳೆದ ವಾರ ಒರಿಸ್ಸಾಗೆ ಭೇಟಿ ನೀಡಿದ ಸಂದರ್ಭ ಭದ್ರತಾ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣವನ್ನು ಬಿಜೆಡಿ ಸಂಸದ ಬ್ರಜ್ ಕಿಶೋರ್ ತ್ರಿಪಾಠಿ ಅವರು ಎತ್ತಿದ್ದ ಸಂದರ್ಭ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು.
ಸದಸ್ಯರ ವಾಗ್ವಾದದಿಂದ ತೀವ್ರ ಅಸಂತುಷ್ಟರಾದ ಸ್ಪೀಕರ್ ಚಟರ್ಜಿ, ಸಭಾಧ್ಯಕ್ಷರ ಮೇಲೆ ಆರೋಪ ಹೊರಿಸುವುದು ಬಹಳ ಸುಲಭ ಎಂದರು. ಆದರೆ, ಯಾವುದು ಸಕಾಲಿಕ, ಯಾವುದು ಅಪ್ರಸ್ತುತ ಎಂಬುದನ್ನು ನಿರ್ಧರಿಸುವುದು ತಾವೇ ಎಂದು ಸ್ಪಷ್ಟಪಡಿಸಿದರು.
ಬುಧವಾರವೂ ಸದಸ್ಯರ 'ನಾಚಿಕೆಗೇಡಿನ' ವರ್ತನೆ ಬಗ್ಗೆ ಕಿಡಿ ಕಾರಿದ್ದ ಚಟರ್ಜಿ ಅವರು, ಇದು 'ಪ್ರಜಾಸತ್ತೆಯ ಕಗ್ಗೊಲೆ' ಎಂದು ಕಿಡಿ ಕಾರಿದ್ದರು.
|