ತ್ರಿಶೂರಿನಲ್ಲಿ ಪ್ರತಿವರ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಪಂಚವಾದ್ಯ ಸಹಿತ ಸಾಲಂಕೃತ ಆನೆಗಳ ವೈಭವೋಪೇತ ಮೆರವಣಿಗೆಗೆ ತಡೆ ಬಿದ್ದಿದೆ. ಕೇರಳ ಹೈಕೋರ್ಟ್ ತೀರ್ಪು ಇದಕ್ಕೆ ಅಂಕುಶ ಹಾಕಿದೆ.
ಯಾವುದೇ ಉತ್ಸವಗಳ ಸಂದರ್ಭ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಆನೆಗಳ ಪೆರೇಡ್ ಮೇಲೆ ಕೆಳ ನ್ಯಾಯಾಲಯವೊಂದು ವಿಧಿಸಿದ್ದ ನಿಷೇಧಾಜ್ಞೆಯನ್ನು ಕೇರಳ ಹೈಕೋರ್ಟು ಎತ್ತಿ ಹಿಡಿದಿದೆ.
ವಿಶ್ವವಿಖ್ಯಾತ ತ್ರಿಶೂರು ಪೂರಂ ಉತ್ಸವದಲ್ಲಿ ಆನೆಗಳ ಮೆರವಣಿಗೆಯೇ ಪ್ರಧಾನ ಆಕರ್ಷಣೆ. ಈ ಕಾರಣಕ್ಕೆ ಇಲ್ಲಿ ಗಜವೈಭವಕ್ಕೆ ಅವಕಾಶ ನೀಡುವಂತಾಗಲು ನಿಷೇಧಾಜ್ಞೆಯನ್ನು ಸ್ವಲ್ಪ ಸಡಿಲಿಸಲಾಗಿತ್ತು. ಆದರೆ ಕಳೆದ ಪೂರಂ ಉತ್ಸವ ಸಂದರ್ಭದಲ್ಲಿ ಆನೆಗಳು ಯದ್ವಾತದ್ವಾ ಓಡಿ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ, ಪ್ರಾಣಿಗಳ ಹಕ್ಕು ಸಂರಕ್ಷಣಾ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿ, ಇದರ ಮೇಲೆ ಪೂರ್ಣ ನಿಷೇಧ ಹೇರಬೇಕೆಂದು ಕೋರಿದ್ದವು.
ಈ ಸಂದರ್ಭದಲ್ಲಿ ಮಾವುತರು ಕೂಡ ಆನೆಗಳಿಂದ ಸಾವನ್ನಪ್ಪುತ್ತಾರೆ ಎಂದು ಪ್ರಾಣಿ ಪ್ರೇಮಿಗಳ ಒಕ್ಕೂಟದ ಅಧ್ಯಕ್ಷ ಪಿ.ವೆಂಕಟೇಶನ್ ಹೇಳಿದ್ದಾರೆ.
ಈ ಬಾರಿಯ ತ್ರಿಶೂರು ಪೂರಂ ಉತ್ಸವಕ್ಕೆ ಸುಮಾರು 19 ದಿನಗಳಷ್ಟೇ ಬಾಕಿ ಇರುವಾಗ ಬಂದಿರುವ ಈ ನಿಷೇಧಾಜ್ಞೆ ಪೂರಂ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಮಡತ್ತಿಲ್ ವರವು ಮತ್ತು ಇಳಂಜಿತ್ತರ ಮೇಳಂ ಮುಂತಾದ ಬಹುಕಾಲದಿಂದ ನಡೆದುಕೊಂಡು ಬಂದಿದ್ದ ಆಚರಣೆಗಳ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ ಎನ್ನುತ್ತಾರೆ ಅವರು.
ಸರಕಾರ ಮಧ್ಯಪ್ರವೇಶಿಸಬೇಕೆಂಬುದು ಉತ್ಸವ ಆಯೋಜಕರ ಒತ್ತಾಸೆ. ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿರುವ ಪಾರಮೇಕ್ಕಾವು ದೇವಸ್ವಂ ಅಧ್ಯಕ್ಷ ಕೆ.ಮನೋಹರನ್, ಈ ಕುರಿತು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಉತ್ಸವ ಸಂದರ್ಭ ಪ್ರಖ್ಯಾತಿ ಪಡೆದಿದ್ದ ಸುಡುಮದ್ದು ಪ್ರದರ್ಶನದ ಮೇಲೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಇದೀಗ ಆನೆಗಳ ಪೆರೇಡ್‌ಗೂ ಅಂಕುಶ ತೊಡಿಸಿರುವುದರೊಂದಿಗೆ ತ್ರಿಶೂರು ಪೂರಂ ಉತ್ಸವ ಗತವೈಭವವಾಗಲಿದೆ ಎಂಬುದು ಉತ್ಸವಪ್ರಿಯರ ನಿರಾಶೆ.
|