ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರದಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿದವಿತ್ ಅನ್ನು ಸಲ್ಲಿಸಿದ್ದು, ರಾಮಸೇತುವೆಯ ಅಸ್ತಿತ್ವವೇ ಇಲ್ಲ, ಅಲ್ಲದೇ ರಾಮನೇ ರಾಮಸೇತುವನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೆ ನೀಡಿದೆ.
ಕೇಂದ್ರ ಸರಕಾರ ಬಹುಕೋಟಿ ವೆಚ್ಚದಲ್ಲಿ ಸೇತುಸಮುದ್ರಂ ಯೋಜನೆ ನಿರ್ಮಾಣಕ್ಕೆ ನಿರ್ಧರಿಸಿದ ಪರಿಣಾಮ, ಈಗಾಗಲೇ ಭಾರತೀಯ ಜನತಾ ಪಕ್ಷ ಸೇರಿದಂತೆ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಯೋಜನೆಯಲ್ಲಿ ರಾಮಸೇತುವನ್ನು ಧ್ವಂಸಗೊಳಿಸುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರುವುದರಿಂದ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದವು.
ಆದರೆ ಇದೀಗ ಕೇಂದ್ರ ಸರಕಾರ ಇಂದು ಮತ್ತೆ ಸರ್ವೊಚ್ಚನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿದವಿತ್‌ನಲ್ಲಿ ರಾಮಸೇತು ಅಸ್ತಿತ್ವದಲ್ಲೇ ಇಲ್ಲ ಎಂಬುದಾಗಿ ಪುನರುಚ್ಚರಿಸಿರುವ ಮೂಲಕ ವಿವಾದವನ್ನು ಜೀವಂತವಾಗಿರಿಸಿದೆ.
ರಾಮಸೇತುವನ್ನು ಸ್ವತ ರಾಮನೇ ಧ್ವಂಸಗೊಳಿಸಿರುವುದಾಗಿ ತಮಿಳಿನ ಕಂಬ ರಾಮಾಯಣ ಮತ್ತು ಪದ್ಮ ಪುರಾಣಗಳಲ್ಲಿ ಉಲ್ಲೇಖಿಸಿರುವುದಾಗಿ ಕೇಂದ್ರ ಪರ ನಿಯೋಜಿಸಲ್ಪಟ್ಟ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರು ಸರ್ವೊಚ್ಚನ್ಯಾಯಾಲಯಕ್ಕೆ ತಿಳಿಸಿದರು.
ರಾಮನೇ ಸ್ವತಃ ಸೇತುವೆಯನ್ನು ಧ್ವಂಸಗೊಳಿಸಿರುವ ಬಗ್ಗೆ ಪುರಾಣದಲ್ಲೇ ದಾಖಲೆ ಇದೆ, ಆ ನಿಟ್ಟಿನಲ್ಲಿ ಧ್ವಂಸಗೊಂಡ ಸೇತುವನ್ನು ಪೂಜಿಸುವುದು ಹೇಗೆಂದು ಅವರು ಪ್ರಶ್ನಿಸಿದ್ದು, ಸರಕಾರ ಅಲ್ಲಿ ಯಾವುದೇ ಸೇತುವೆಯನ್ನು ಧ್ವಂಸಗೊಳಿಸುವುದಿಲ್ಲ, ಬದಲಿಗೆ ಎರಡು ದೇಶಗಳಿಗೆ ಸಂಪರ್ಕಕ್ಕೆ ಅನೂಕೂಲವಾಗುವ ನಿಟ್ಟಿನಲ್ಲಿ ಕಾಲುವೆಯನ್ನು ನಿರ್ಮಿಸುತ್ತಿರುವುದಾಗಿ ವಾದ ಮಂಡಿಸಿದರು.
|