ಲಕ್ನೋ: ಬಹುಜನ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ರಾಜಾರಾಂ ಅವರನ್ನು ಮಾಯಾವತಿ ತನ್ನ ಉತ್ತರಾಧಿಕಾರಿಯನ್ನಾಗಿಸಲು ಬಯಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ ಎನ್ನಲಾಗಿದೆ.
ಆಗಸ್ಟ್ 9ರಂದು ನಡೆದ ಸಮಾವೇಶದಲ್ಲಿ ತನ್ನ ಕೊಲೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಮಾಯಾವತಿ ಬಹಿರಂಗ ಸಭೆಯಲ್ಲಿ ಹೇಳಿದ ಬಳಿಕ, ಮಾಯಾವತಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ತನಗೇನಾದರೂ ಆದಲ್ಲಿ ಪಕ್ಷಕ್ಕೇನೂ ಆಗದು ಮತ್ತು ತನ್ನ ಉತ್ತರಾಧಿಕಾರಿಯನ್ನು ಆರಿಸಲಾಗಿದೆ ಎಂದು ಅವರು ಸಭೆಯಲ್ಲಿ ಹೇಳಿದ್ದರಾದರೂ, ಉತ್ತರಾಧಿಕಾರಿ ಯಾರೆಂದು ಬಹಿರಂಗ ಪಡಿಸಿರಲಿಲ್ಲ.
ಆದರೆ ಪಕ್ಷದ ಮೂಲಗಳ ಪ್ರಕಾರ ಅವರ ನಾಯಕತ್ವ ಮುಂದುವರಿಸಲು ಸೂಕ್ತವಿರುವ ವ್ಯಕ್ತಿ ಎಂದರೆ ಉಪಾಧ್ಯಕ್ಷ ರಾಜಾರಾಂ ಮಾತ್ರ. ಅಷ್ಟೇನೂ ಪ್ರಸಿದ್ಧಿ ಇಲ್ಲದ ರಾಜಾರಾಂ ಮಧ್ಯಪ್ರದೇಶ ವ್ಯವಹಾರಗಳ ಉಸ್ತುವಾರಿ ವಹಿಸಿದ್ದಾರೆ. ಮಾಯಾವತಿ ಅವರ ರಾಜಕೀಯ ಗುರು ಕಾನ್ಷೀರಾಂ ಅವರು ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಮಾಯಾವತಿ ಉಪಾಧ್ಯಕ್ಷರಾಗಿದ್ದರು. ಮಾಯವತಿ ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ತನ್ನ ಸ್ಥಾನಕ್ಕೆ ರಾಜಾರಾಂ ಅವರನ್ನು ನೇಮಿಸಿದ್ದರು.
5.8 ಅಡಿ ಎತ್ತರದ, ಶ್ವೇತವರ್ಣದ ಸುಂದರ ಪುರುಷ ರಾಜಾರಾಂ ಈ ಹಿಂದೆ ಬಿಎಸ್‌ಪಿಯ ದೆಹಲಿ ಘಟಕದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯರಾಗಿದ್ದು, ಮುಂದಿನ ವರ್ಷ ಅವರ ಅವಧಿ ಕೊನೆಗೊಳ್ಳಲಿದೆ.
ಕಾನ್ಷೀರಾಂ ಕಾಲದಿಂದಲೂ ಪಕ್ಷದಲ್ಲಿರುವ ಕೆಲವೇ ನಾಯಕರಲ್ಲಿ ರಾಜಾರಾಂ ಕೂಡ ಒಬ್ಬರಾಗಿದ್ದು, ಮಾಯಾ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಸಂಭವ ದಟ್ಟವಿದೆ.
ಉತ್ತರಾಧಿಕಾರಿಯ ಹೆಸರನ್ನು ಹೊಂದಿರುವ ಮುಚ್ಚಿದ ಲಕೋಟೆಯನ್ನು ತನ್ನಿಬ್ಬರು ವಿಶ್ವಾಸಿಗಳಿಗೆ ಹಸ್ತಾಂತರಿಸಿರುವುದಾಗಿ ಅವರು ಲಕ್ನೋ ಸಮಾವೇಶದಲ್ಲಿ ಹೇಳಿದ್ದರು.
ಆತ ತನಗಿಂತ ಸುಮಾರು 18-20 ವರ್ಷಗಳಷ್ಟು ಕಿರಯ ವ್ಯಕ್ತಿ. ತನ್ನ ಕುಟುಂಬಿಕನಲ್ಲ. ತನ್ನ ಸಮುದಾಯದವನೂ ಅಲ್ಲ ಎಂಬುದಾಗಿ ಮಾಯಾವತಿ ತನ್ನ ಉತ್ತರಾಧಿಕಾರಿಯನ್ನು ವರ್ಣಿಸಿದ್ದು, ಅವರ ಈ ಎಲ್ಲಾ ಹೇಳಿಕೆಗಳು ರಾಜಾರಾಂ ಅವರನ್ನು ಹೋಲುತ್ತವೆ.
|