ನವದೆಹಲಿ: ಬಿಎಂಡಬ್ಲ್ಯು ಬಯಲು ಪ್ರಕರಣದಲ್ಲಿ ನ್ಯಾಯಾಂಗ ನಿರ್ವಹಣೆಗೆ ಅಡ್ಡಿಯಾಗಿರುವ ಆರೋಪದಲ್ಲಿ ಹಿರಿಯ ವಕೀಲರಾದ ಆರ್.ಕೆ.ಆನಂದ್ ಮತ್ತು ಐ.ಯು.ಖಾನ್ ಅವರುಗಳನ್ನು ದೆಹಲಿ ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಮಾನಿಸಿದೆ.
"ಅವರು ಹಿರಿಯ ವಕೀಲರು. ಅವರಿಬ್ಬರು ಬಿಎಂಡಬ್ಲ್ಯು ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವರ್ತನೆಗಾಗಿ ಷರತ್ತುಬದ್ಧ ಇಲ್ಲವೇ ಬೇಷರತ್ ಕ್ಷಮಾಯಾಚನೆ ಮಾಡಿಲ್ಲ" ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಸರೀನ್ ಮತ್ತು ಮದನ್ ಬಿ ಲೋಕುರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ನ್ಯಾಯಪೀಠವು 'ಪ್ರಕರಣ ಬಯಲು' ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ 112 ಪುಟಗಳ ತೀರ್ಪಿನಲ್ಲಿ ಈ ಇಬ್ಬರು ವಕೀಲರನ್ನು ದೋಷಿಗಳೆಂದು ಹೇಳಿದ್ದು, ಈ ಇಬ್ಬರು ನಾಲ್ಕು ತಿಂಗಳ ಕಾಲ ದೆಹಲಿ ಹೈಕೋರ್ಟ್ ಹಾಗೂ ಆಧೀನ ನ್ಯಾಯಲಯಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಹಾಜರಾಗಬಾರದು ಎಂಬ ಶಿಕ್ಷೆ ವಿಧಿಸಿದ್ದು ಅವರ ಹಿರಿಯ ವಕೀಲರೆಂಬ ಪದನಾಮವನ್ನು ತೆಗೆದು ಹಾಕಲು ನ್ಯಾಯಪೀಠ ಶಿಫರಸ್ಸು ಮಾಡಿದೆ. ಅಲ್ಲದೆ ಇಬ್ಬರು ನ್ಯಾಯವಾದಿಗಳಿಗೆ ತಲಾ ಎರಡು ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದು ಯುವ ನ್ಯಾಯಾವಾದಿಗಳ ವರ್ತನೆಯಲ್ಲ, ಈ ಇಬ್ಬರು ಪರಿಣಿತ ವೃತ್ತಿನಿರತರಾಗಿದ್ದು, ಇವರಿಂದ ಇಂತಹ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅದಾಗ್ಯೂ, ಈ ಇಬ್ಬರು ನ್ಯಾಯಾಲಯಗಳಲ್ಲಿ ಹಾಜರಾಗದಂತೆ ನಿಷೇಧ ಹೇರಿದ್ದರೂ, ಅವರು ಕಾನೂನು ಸಲಹೆಗಳನ್ನು ನೀಡಬಹುದಾಗಿದೆ. ಏತನ್ಮಧ್ಯೆ, ಸುಮಾರು ವರ್ಷಗಳ ಕಾಲದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಹಾಯ ಮಾಡಿರುವ ಅರವಿಂದ ನಿಗಮ್ ಅವರಿಗೆ ಹಿರಿಯ ನ್ಯಾಯವಾದಿ ಪದನಾಮ ನೀಡುವಂತೆ ನ್ಯಾಯಾಲಯ ಶಿಫಾರಸ್ಸು ಮಾಡಿದೆ.
ಪ್ರಕರಣದ ಹಿನ್ನೆಲೆ ಆರು ಮಂದಿಯ ಸಾವಿಗೆ ಕಾರಣವಾಗಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜೀವ್ ನಂದಾನನ್ನು ಕಾಪಾಡಲು, ನಂದಾರ ಪರ ವಕೀಲರಾಗಿದ್ದ ಆನಂದ್, ಪ್ರಕರಣದ ಏಕೈಕ ಸಾಕ್ಷಿಯಾಗಿದ್ದ ಸುನಿಲ್ ಕುಲಕರ್ಣಿ ನ್ಯಾಯಾಲಯದಲ್ಲಿ ಸಾಕ್ಷಿ ನೀಡದಂತೆ ಮನವೊಲಿಸಲು, ಸರಕಾರಿ ವಕೀಲರಾಗಿದ ಐ.ಯು.ಖಾನ್‌ರೊಂದಿಗೆ ಪ್ರಯತ್ನಿಸಿದ್ದು, ಈ ದೃಶ್ಯವನ್ನು ಎನ್‌ಡಿಟಿವಿ ಸೆರೆಹಿಡಿದಿದ್ದು, ಪ್ರಕರಣ ಬಯಲಾಗಿತ್ತು.
ಸಂಜೀವ್ ನಂದಾ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಪುತ್ರ ಹಾಗೂ ನಿವೃತ್ತ ಅಡ್ಮಿರಲ್ ಎಸ್ಎಂ ನಂದಾ ಅವರ ಮೊಮ್ಮಗ.
|