ಹನ್ನೊಂದರ ಹರೆಯದ ಬಲೂನು ಮಾರುವ ಬಾಲಕನೊಬ್ಬ, ಇಬ್ಬರು ಕಪ್ಪುವಸ್ತ್ರಧಾರಿಗಳು ಪ್ಲಾಸ್ಟಿಕ್ ಚೀಲದಲ್ಲಿ ಕಸದತೊಟ್ಟಿಯಲ್ಲಿ ಏನನ್ನೊ ಇರಿಸಿರುವುದನ್ನು ತಾನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಬಾಲಕನ ಸೊಂಟದಲ್ಲಿ ಸಜೀವ ಬಾಂಬ್! ಬಾರಾಕಂಬ ರಸ್ತೆಯಲ್ಲಿ ಬಲೂನು ಮಾರುವ ಈ ಹುಡುಗ ಗೋಪಾಲದಾಸ್ ಕಟ್ಟಡದ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿರುವುದನ್ನು ಕಣ್ಣಾರೆ ಕಂಡಿದ್ದು, ಆಘಾತಗೊಂಡ ಈತ ಸುಮಾರು ಒಂದೂವರೆ ಗಂಟೆಗಳ ಕದಲದೆ ನಿಂತಿದ್ದ. ಆದರೆ ಆತನ ಸೊಂಟದಲ್ಲಿ ಕಟ್ಟಿದ್ದ ಬಲೂನು ತುಂಬಿದ ಪರ್ಸ್ ಇದ್ದಕ್ಕಿದ್ದಂತೆ ಸಂಶಯ ಹುಟ್ಟುಹಾಕಿತು. ಬಾಲಕನೊಬ್ಬ ಸೊಂಟದಲ್ಲಿ ಸಜೀವ ಬಾಂಬ್ ಕಟ್ಟಿಕೊಂಡಿದ್ದಾನೆಂಬ ವದಂತಿ ಹಬ್ಬಿತು.
ತಕ್ಷಣವೇ ಪೊಲೀಸರು ಬಾಲಕನ್ನು ಸುತ್ತುವರಿದರು. ಆದರೆ ಆತನ ಸೊಂಟದಲ್ಲಿರುವುದು ಬಲೂನು, ಬಾಂಬಲ್ಲ ಎಂಬ ವಿಚಾರ ಗೊತ್ತಾಯಿತು. ಆದರೆ ಬಾಲಕ ಅಷ್ಟಕ್ಕೆ ನಿಲ್ಲಿಸಲಿಲ್ಲ. ಆತನಿಗೆ ಪೋಲೀಸರ ಬಳಿ ಇನ್ನೇನೋ ಹೇಳಬೇಕಾಗಿತ್ತು. ಕಪ್ಪು ಕುರ್ತಾ ಪೈಜಾಮ ಧರಿಸಿದ್ದ ಗಡ್ಡಧಾರಿ ವ್ಯಕ್ತಿ ರಿಕ್ಷದಿಂದ ಇಳಿದು, ಕಸದ ತೊಟ್ಟಿಯಲ್ಲಿ ಪ್ಲಾಸ್ಟಿಕ್ ಚೀಲವೊಂದನ್ನು ಎಸೆದು ಹೋಗಿದ್ದು, ಇದಾಗಿ ಸುಮಾರು 15 ನಿಮಿಷಗಳ ಬಳಿಕ ಕಸದಬುಟ್ಟಿ ಸಿಡಿಯಿತು ಎಂದು ಹೇಳಿದ್ದಾನೆ.
ಪೊಲೀಸರು ಹುಡುಗನನ್ನು ಪ್ರಶ್ನಿಸುತ್ತಿದ್ದು, ಆತ ನೀಡಿದ ವಿವರಣೆಯೊಂದಿಗೆ ವ್ಯಕ್ತಿಗಳ ನಕಾಶೆ ಸಿದ್ಧಪಡಿಸುವುದಾಗಿ ಹೇಳಿದ್ದಾರೆ. ಓರ್ವ ವ್ಯಕ್ತಿ ಕಪ್ಪು ಉಡುಪು (ಹೆಚ್ಚಿನಂಶ ಕುರ್ತಾ ಪೈಜಾಮ ಇರಬೇಕು) ತೊಟ್ಟಿದ್ದು ಉದ್ದನೆಯ ಗಡ್ಡ ಹೊಂದಿದ್ದ. ಇನ್ನೋರ್ವ ವ್ಯಕ್ತಿ ಕ್ಲಿನ್ ಶೇವ್ ಮಾಡಿದ್ದು, ಪ್ಯಾಂಟ್ ಷರ್ಟ್ ತೊಟ್ಟಿದ್ದ ಎಂದು ಬಾಲಕ ಹೇಳಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಬಾಲಕನ ಜತೆಗಿದ್ದ ಇತರ ಮಕ್ಕಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಹುಡುಗನ ಹೆತ್ತವರನ್ನೂ ಪೊಲೀಸ್ ಠಾಣೆಗೆ ಕರೆಸಲಾಗಿದೆ.
ಏತನ್ಮಧ್ಯೆ, ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ಒಂದು ಎನ್‌ಜಿಒ ಮತ್ತು ಮನಶಾಸ್ತ್ರಜ್ಞರೂ ಆ ಬಾಲಕನಿಗೆ ಘಟನೆಯನ್ನು ಸ್ಪಷ್ಟವಾಗಿ ನೆನಪಿಸಿಕೊಂಡು ನಿರೂಪಿಸಲು ಸಹಾಯ ಮಾಡುತ್ತಿದ್ದಾರೆ.
|