ದೇಶದಲ್ಲಿನ ಹಣದುಬ್ಬರ ಒಂದೇ ಸಮನೆ ಏರುತ್ತಿದ್ದರೆ,ಶೇರುಪೇಟೆ ಹಾವು-ಏಣಿಯಾಟದಲ್ಲಿದ್ದರೆ, ಮತ್ತೊಂದು ಭಾರತ ಅತೀ ಹೆಚ್ಚು ಭ್ರಷ್ಟಾಚಾರ ಎಸಗಿದ ರಾಷ್ಟ್ರದ ಪಟ್ಟಿಯಲ್ಲಿ 85ನೇ ಸ್ಥಾನ ಪಡೆದಿದೆ.
ಅಂತಾರಾಷ್ಟ್ರೀಯ ಮಟ್ಟದ ಭ್ರಷ್ಟಾಚಾರ ಸಂವೇದಿ ಸೂಚ್ಯಂಕದ ಪ್ರಕಾರ ಭ್ರಷ್ಟಾಚಾರದಲ್ಲಿ ಭಾರತ 85ನೇ ಸ್ಥಾನ ಗಳಿಸಿದ್ದು, ಕಳೆದ ವರ್ಷ ಬಿಡುಗಡೆಗೊಂಡ ವರದಿಯಲ್ಲಿ ಭಾರತ 72ನೇ ಸ್ಥಾನ ಪಡೆದಿತ್ತು.
180ದೇಶಗಳ ಪಟ್ಟಿಯಲ್ಲಿ ಭಾರತ 85ನೇ ಸ್ಥಾನಗಳಿಸುವ ಮೂಲಕ, ಭ್ರಷ್ಟಾಚಾರದಲ್ಲೂ ಭಾರತ ತನ್ನ ಸ್ಥಾನವನ್ನು ಮೇಲಕ್ಕೊಯ್ಯತೊಡಗಿದೆ. ಸಂಸತ್‌ನಲ್ಲಿ ವೋಟಿಗಾಗಿ ಲಂಚಹಗರಣದ ನಂತರ ಭಾರತ ಭ್ರಷ್ಟಾಚಾರದಲ್ಲಿನ ಹಣೆಪಟ್ಟಿ ಎತ್ತರಕ್ಕೇರಿಸತೊಡಗಿದೆ.
ಆದರೂ ನೆರೆಯ ಪಾಕಿಸ್ತಾನ ಭ್ರಷ್ಟಾಚಾರದಲ್ಲಿ 134 ನೇ ಸ್ಥಾನಗಳಿಸಿರುವುದರಿಂದ ಭಾರತ ಅದರಲ್ಲೂ ಸ್ವಲ್ಪ ಮಟ್ಟಿನ ಹೆಮ್ಮೆಪಟ್ಟುಕೊಳ್ಳಬಹುದಾಗಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾದ ಅಧ್ಯಕ್ಷ ಅಡ್ಮಿರಲ್ ಆರ್.ಎಚ್.ತಾಹಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾ ಭಾರತಕ್ಕಿಂತ ಸ್ವಲ್ಪ ಉತ್ತಮವಾಗಿದ್ದು, ಅದು ಈ ಬಾರಿ 72ನೇ ಸ್ಥಾನ ಪಡೆದರೆ ಸೋಮಾಲಿಯಾ 180ನೇ ಸ್ಥಾನ ಪಡೆದು ಅತ್ಯಂತ ಭ್ರಷ್ಟ ರಾಷ್ಟ್ರವಾಗಿದೆ. ಅಲ್ಲದೇ ಡೆನ್ಮಾರ್ಕ್, ನ್ಯೂಜಿಲ್ಯಾಂಡ್ ಮತ್ತು ಸ್ವೀಡನ್ ಕಡಿಮೆ ಭ್ರಷ್ಟಾಚಾರ ಎಸಗಿದ ರಾಷ್ಟ್ರಗಳ ಪಟ್ಟಿಗೆ ಸೇರಿವೆ.
ಭಾರತದಲ್ಲಿನ ರಾಜಕಾರಣ, ಪೊಲೀಸ್ ಇಲಾಖೆ ಮತ್ತು ಕೆಳ ಹಂತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರ ತಾಂಡವಾಡುತ್ತಿರುವುದಾಗಿ ವರದಿಯಲ್ಲಿ ತಿಳಿಸಿದೆ.
|