ದಕ್ಷಿಣ ದೆಹಲಿಯ ಮೆಹರೂಲಿ ಪ್ರದೇಶದಲ್ಲಿ ಶನಿವಾರ ಮಧ್ನಾಹ್ನ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ 13ರ ಹರೆಯದ ಬಾಲಕ ಬಲಿಯಾಗಿದ್ದು, 23 ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಮೋಟಾರ್ ಬೈಕ್‌ನಲ್ಲಿ ಆಗಮಿಸಿದ್ದ ವ್ಯಕ್ತಿಗಳು ಈ ಬಾಂಬ್ ಅನ್ನು ಇರಿಸಿರುವ ಶಂಕೆ ಇರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಈ ಬಾಂಬ್ ಕಡಿಮೆ ಪ್ರಮಾಣದ ತೀವ್ರತೆ ಹೊಂದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟ ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲದೇ ಬಾಂಬ್ ನಿಷ್ಕ್ರಿಯದಳ ಕೂಡ ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ಹೇಳಿದ್ದು, ಮಧ್ನಾಹ್ನ 2-15ಕ್ಕೆ ಸಂಭವಿಸಿದ ಸ್ಫೋಟದಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದು,ಅದರಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನ ಮತ್ತೆ ಸ್ಫೋಟ ನಡೆದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
|