ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನೋಬೆಲ್ ಪ್ರಶಸ್ತಿ: 11 ಬಾರಿ ವಿಫಲರಾಗಿದ್ದ ನೆಹರೂ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಬೆಲ್ ಪ್ರಶಸ್ತಿ: 11 ಬಾರಿ ವಿಫಲರಾಗಿದ್ದ ನೆಹರೂ!
ನೋಬೆಲ್ ಪ್ರತಿಷ್ಠಾನವು, ಶಾಂತಿ ಪ್ರಶಸ್ತಿಗಾಗಿ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಮಾತ್ರವಲ್ಲದೆ, ಜವಾಹರ್‌ಲಾಲ್ ನೆಹರೂ ಅವರ ಹೆಸರನ್ನೂ ನಿರ್ಲಕ್ಷಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅದೂ ಒಂದೆರಡು ಬಾರಿಯಲ್ಲ. 20ನೆ ಶತಮಾನದ ಪ್ರಮುಖ ಮುತ್ಸದ್ಧಿಗಳಲ್ಲೊಬ್ಬರಾಗಿದ್ದ ನೆಹರೂ ಅವರ ಹೆಸರನ್ನು 11 ಬಾರಿ ಕಡೆಗಣಿಸಲಾಗಿದೆ.

ನೋಬೆಲ್ ಪ್ರಶಸ್ತಿಯ ನಾಮನಿರ್ದೇಶನಗಳ ಹಳೆಯ ದಾಖಲೆಗಳ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇರಿಸಲಾಗುತ್ತದಾದರೂ, ಪ್ರತಿಷ್ಠಾನವು 1901-56ರ ತನಕದ ದತ್ತಾಂಶಗಳನ್ನು ತೆರೆದಿದೆ. ಈ ವಿವರಗಳು, ನೆಹರೂ ಅವರು ಆಧುನಿಕ ಭಾರತದ ತಳಪಾಯವನ್ನು ನಿರ್ಮಿಸುತ್ತಿದ್ದ 50ರ ದಶಕದ ಆದಿಯಲ್ಲಿ ಅವರ ಹೆಸರನ್ನು ನೋಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನ ಗೊಳಿಸಲಾಗಿತ್ತು ಎಂಬ ವಿಚಾರವನ್ನು ಬಹಿರಂಗ ಪಡಿಸಿದೆ.

1950ರ ಆದಿಯಲ್ಲಿ ನೋಬೆಲ್ ಪ್ರಶಸ್ತಿಗಾಗಿ ಎರಡು ನಾಮನಿರ್ದೇಶನಗಳನ್ನು ಕಳುಹಿಸಲಾಗಿತ್ತು. ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ಪ್ರೊಫೆಸರ್ ಎಲ್.ಆರ್.ಶಿವಸುಬ್ರಮಣಿಯನ್ ಹಾಗೂ ಮುಂಬೈ ವಿಶ್ವವಿದ್ಯಾನಿಲಯದ ರಾಜಕೀಯಶಾಸ್ತ್ರದ ಪ್ರೊಫೆಸರ್ ಎಂ.ವೆಂಕಟರಂಗಯ್ಯ ಅವರುಗಳು ನಾಮನಿರ್ದೇಶನಗಳನ್ನು ಕಳುಹಿಸಿದ್ದರು.

ಲಭ್ಯವಿರುವ ವಿವರಗಳ ಪ್ರಕಾರ, "ನೆಹರೂ ಅವರು ಭಾರತದಲ್ಲಿ ಸಂಸದೀಯ ಸರಕಾರವನ್ನು ಸ್ಥಾಪಿಸಿದ್ದಾರೆ. ಮತ್ತು ಅವರು ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರ ತಟಸ್ಥ ವಿದೇಶಾಂಗ ನೀತಿ ಮತ್ತು ಗಾಂಧೀಜಿಯವರ ಇದೇ ತತ್ವಗಳನ್ನು ಎತ್ತಿಹಿಡಿದಿರುವುದಕ್ಕಾಗಿ ಅವರ ಹೆಸರನ್ನು ನಾಮನಿರ್ದೇಶನಗೊಳಿಸಲಾಗಿದೆ" ಎಂದು ನೆಹರೂ ಅವರ ಹೆಸರನ್ನು ಶಿಫಾರಸ್ಸುಗೊಳಿಸುವ ವೇಳೆಗೆ ಹೇಳಲಾಗಿದೆ.

1951ರಲ್ಲಿ ನೆಹರೂ ಅವರ ಹೆಸರನ್ನು ಮತ್ತೆ ಮೂರು ಬಾರಿ ನಾಮನಿರ್ದೇಶನಗೊಳಿಸಲಾಗಿತ್ತು. 1946ರ ನೋಬೆಲ್ ಪ್ರಶಸ್ತಿ ವಿಜೇತೆ ಅಮೆರಿಕದ ಎಮಿಲಿ ಗ್ರೀನ್ ಬಾಚ್, ಅಮೆರಿಕದ ಫ್ರೆಂಡ್ಸ್ ಸೇವಾ ಸಮಿತಿಯ ಪರವಾಗಿ ಲೆವೀಸ್ ಹಾಸ್ಕಿನ್ಸ್ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್‌ಗಳ ಪರವಾಗಿ ಶ್ರಿನವಾಲ ಶರ್ಮಾ ಅವರುಗಳೂ ನೆಹರೂ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.

ಎರಡು ವರ್ಷಗಳ ಬಳಿಕ ಬ್ರಸ್ಸೆಲ್ಸ್‌ನಿಂದ ನೆಹರೂ ಪರವಾಗಿ ಮತ್ತೆ ಮೂರು ನಾಮನಿರ್ದೇಶನಗಳನ್ನು ಸ್ವೀಡನ್‌ಗೆ ಕಳುಹಿಸಲಾಗಿತ್ತು. ಬೆಲ್ಜಿಯಂ ರಾಷ್ಟ್ರೀಯ ಶಾಸನಸಭೆಯ ಸದಸ್ಯರು, ಬೆಲ್ಜಿಯಂ ಸೆನೆಟ್‌ನ ಸದಸ್ಯರು ಮತ್ತು ಬ್ರಕ್ಸೆಲ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ಗಳು ಈ ನಾಮ ನಿರ್ದೇಶನಗಳನ್ನು ಕಳುಹಿಸಿದ್ದರು.

1954ರಲ್ಲಿ ನೆಹರೂ ಪರವಾಗಿ ಮತ್ತೆರಡು ನಾಮನಿರ್ದೇಶನಗಳು ಮಾಡಲ್ಪಟ್ಟಿದ್ದವು. ಈ ವೇಳೆ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲೆಯವರು ನೆಹರೂ ಅವರ ಹೆಸರನ್ನು ನೋಬೆಲ್ ಪ್ರಶಸ್ತಿಗಾಗಿ ನಿರ್ದೇಶನಗೊಳಿಸಿದ್ದರು.

ಸ್ವಿಜರ್‌ಲ್ಯಾಂಡ್‌ನ ನ್ಯೂಚಟೆಲ್ ವಿಶ್ವವಿದ್ಯಾನಿಲಯ ಒಂದರ ಪ್ರೊಫೆಸರ್ ಎಡ್ಮಂಡ್ ಪ್ರೈವೆಟ್ ಎಂಬವರು ನೆಹರೂ ಅವರ ಹೆಸರನ್ನು ಮತ್ತೊಮ್ಮೆ ಶಿಫಾರಸ್ಸು ಮಾಡಿದ್ದರು. ಆದರೆ ಈ ಹನ್ನೊಂದು ಬಾರಿಯೂ ನೆಹರೂ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐದು ರಾಜ್ಯಗಳಲ್ಲಿ ಚುನಾವಣಾ ದಿನಾಂಕ ಘೋಷಣೆ
ಬರಿಗೈಲಿ ಹಿಂತಿರುಗಿದ ದುರಾಸೆಯ ವರ!
ಬಜರಂಗದಳ ಮ‌ೂಲಭೂತವಾದಿ ಸಂಘಟನೆ: ಪಟ್ನಾಯಕ್
ಮಾಯ ಮಾಯೆ: ಸೋನಿಯಾರ ರ‌್ಯಾಲಿ ರದ್ದು
ಮಾಯಾ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ತ.ನಾ: ಕ್ರೈಸ್ತರ ವಿಶೇಷ ಮೀಸಲಾತಿ ಹಿಂತೆಗೆತ