ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಂದೇ ದಿನ 20 ಪ್ರನಾಳ ಶಿಶುಗಳ ಜನನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂದೇ ದಿನ 20 ಪ್ರನಾಳ ಶಿಶುಗಳ ಜನನ
PTI
ಸಂತಾನಹೀನರಿಗೆ ಆಶಾಕಿರಣವಾಗಿ ಬೆಳೆದುಬಂದ ಟೆಸ್ಟ್ ಟ್ಯೂಬ್ (ಪ್ರನಾಳ) ಶಿಶು ತಂತ್ರಜ್ಞಾನವು ಹೊಸದೊಂದು ದಾಖಲೆ ನಿರ್ಮಿಸಿದ್ದು, ಒಂದೇ ದಿನ 20 ಪ್ರನಾಳ ಶಿಶುಗಳು ಸಿಸೇರಿಯನ್ ಶಸ್ತ್ರಕ್ರಿಯೆ ಮೂಲಕ ಲೋಕದ ಬೆಳಕು ಕಂಡಿವೆ.

ಈರೋಡ್‌ನ ಸುಧಾ ಹೈಟೆಕ್ ಐವಿಎಫ್ ಆಸ್ಪತ್ರೆಯಲ್ಲಿ ಅಕ್ಟೋಬರ್ 30ರಂದು ಈ 'ಸಂತಾನೋತ್ಸವ' ನಡೆದಿದ್ದು, ಈ ಆಸ್ಪತ್ರೆಯಲ್ಲಿ ಒಂದೇ ದಿನ 20 ಶಿಶುಗಳ ವೈಜ್ಞಾನಿಕ ಜನನಕ್ಕೆ ಪ್ರಧಾನ ಕಾರಣ ಮೂಢನಂಬಿಕೆಯೂ ಆಗಿತ್ತು ಎಂಬುದು ಉಲ್ಲೇಖಾರ್ಹ.

ಹೆತ್ತವರ ಆಕಾಂಕ್ಷೆಯಂತೆ ಆಸ್ಪತ್ರೆ ನಿರ್ದೇಶಕಿ ಡಾ.ಧನಭಾಗ್ಯಂ ಅವರು 12 ಮಂದಿ ತಾಯಂದಿರಿಗೆ ಸಿಸೇರಿಯನ್ ಶಸ್ತ್ರಕ್ರಿಯೆ ನೆರವೇರಿಸಿದರು. "ಎಲ್ಲ ತಾಯಂದಿರೂ ತಮಗೆ ಅಕ್ಟೋಬರ್ 30ರಂದೇ ಮಕ್ಕಳು ಹುಟ್ಟಬೇಕೆಂಬ ವಿಶಿಷ್ಟ ಬೇಡಿಕೆ ಮುಂದಿಟ್ಟಿದ್ದರು" ಎಂದಿದ್ದಾರೆ ಧನಭಾಗ್ಯಂ. ಇದೇಕೆಂದರೆ, ಆ ದಿನ ಸ್ಕಂದ ಷಷ್ಠಿ. ತಮಿಳುನಾಡಿನ ಆರಾಧ್ಯ ದೈವವಾಗಿರುವ ಮುರುಗ (ಸ್ಕಂದ)ನು ರಾಕ್ಷಸ ರಾಜ ಶೂರ ಪದ್ಮಾಸುರನ ಮೇಲೆ ವಿಜಯ ಸಾಧಿಸಿದ ಪುಣ್ಯ ದಿನ.

12 ತಾಯಂದಿರಲ್ಲಿ ಎಂಟು ಮಂದಿ ಅವಳಿ ಮಕ್ಕಳ ತಾಯಿಯಾಗಿದ್ದರು. ವಿಶೇಷವೆಂದರೆ, ಅಲ್ಲಿದ್ದ ಗೋವಿಂದಸ್ವಾಮಿ-ಸರೋಜಾ ದಂಪತಿಯು ತಮಗೆ ಮಕ್ಕಳಾಗಲಿಲ್ಲ ಎಂಬುದರಿಂದ ಕೊರಗಿ, ಈ ಆಸ್ಪತ್ರೆಗೆ ಬರುವ ಮುನ್ನ ಆತ್ಮಹತ್ಯೆಗೂ ಯೋಚಿಸಿದ್ದರು. ಇದೀಗ "ದೇವರು ನಮಗೆ ಅವಳಿ ಮಕ್ಕಳನ್ನು ದಯಪಾಲಿಸಿದ್ದಾನೆ" ಎನ್ನುತ್ತಾರೆ ಅವರು ಸಂತೋಷದಿಂದ.

ಕಳೆದೊಂದು ದಶಕದಲ್ಲಿ ಡಾ.ಧನಭಾಗ್ಯಂ ಅವರು ಸುಮಾರು ಒಂದು ಸಾವಿರದಷ್ಟು ಅಂತರ್-ಗರ್ಭಾಶಯ ಫಲೀಕರಣ (ಇನ್-ವಿಟ್ರೋ ಫರ್ಟಿಲೈಸೇಶನ್) ನೆರವೇರಿಸಿದ್ದಾರೆ. ಅಕ್ಟೋಬರ್ 30ರಂದು ಮುಂಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಅವರು 20 ಶಿಶುಗಳ ಜನನಕ್ಕಾಗಿ 12 ಸಿಸೇರಿಯನ್ ಶಸ್ತ್ರಕ್ರಿಯೆಗಳನ್ನು ನೆರವೇರಿಸಿದ ಸಾಧನೆ ಮಾಡಿದ್ದಾರೆ.

ತಾಯಂದಿರೆಲ್ಲರೂ 35ರಿಂದ 51 ವರ್ಷ ಪ್ರಾಯದವರಾಗಿದ್ದು, ಅಂಡಾಣುಗಳ ಸಂಖ್ಯಾ ಕೊರತೆ, ಅಂಡಾಣು ಸಂಬಂಧಿತ ವೈಫಲ್ಯ ಅಥವಾ ಅಂಡಾಣುವಾಹಕ ನಾಳಗಳ ಸಮಸ್ಯೆಯಿಂದ ಬಳಲುತ್ತಿದ್ದವರು. ಇತ್ತೀಚೆಗೆ ಜನಪ್ರಿಯವಾಗಿರುವ ಐಸಿಎಸ್ಐ (ಇಂಟ್ರಾ-ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜಕ್ಷನ್) ವಿಧಾನದ ಮೂಲಕ, ವೀರ್ಯವನ್ನು ನೇರವಾಗಿ ಅಂಡಾಣುವಿಗೆ ಇಂಜೆಕ್ಟ್ ಮಾಡಿ ಅದನ್ನು ಫಲಿತಗೊಳಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
ಮಹಾರಾಷ್ಟ್ರ ಹಿಂಸಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ: ಸು.ಕೋ
ಭೀಮಸೇನ್ ಜೋಷಿಯವರಿಗೆ ಭಾರತ ರತ್ನ
ಚಂದ್ರನ ಪಥ ಸೇರಿದ ಚಂದ್ರಯಾನ-1
ಶಿಮ್ಲಾ: ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 45 ಸಾವು
ಮತ್ತೆ ಪಾಕ್‌ನಿಂದ ಕದನವಿರಾಮ ಉಲ್ಲಂಘನೆ