ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರಿ ವಿಧಾನಸಭೆಯನ್ನು ಅಮಾನತಿನಲ್ಲಿಡುವ ಕ್ರಮದಿಂದ ಕುದುರೆ ವ್ಯಾಪಾರಕ್ಕೆ ಅವಕಾಶವಾಗಬಹುದೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಂಗಳವಾರ ಶಂಕಿಸಿದ್ದು, ವಿಧಾನಸಭೆ ವಿಸರ್ಜಿಸಿ ಶೀಘ್ರದಲ್ಲೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಉನ್ನತ ಸಂವಿಧಾನಿಕ ಮೌಲ್ಯಗಳನ್ನು ಕಾಯ್ದುಕೊಳ್ಳಬೇಕು ಮತ್ತು ಪ್ರಜಾಪ್ರಭುತ್ವ ಮನೋಭಾವವನ್ನು ಎತ್ತಿಹಿಡಿಯಬೇಕು. ಅದಕ್ಕೆ ಜನಾದೇಶವನ್ನು ಕೂಡಲೇ ಪಡೆಯಬೇಕು ಎಂದು ದೇವೇಗೌಡ ಹೇಳಿದ್ದಾರೆ.
ಶಾಸಕರನ್ನು ಸೆಳೆದುಕೊಳ್ಳಲು ಪಕ್ಷಗಳು ಪ್ರಸಕ್ತ ಪರಿಸ್ಥಿತಿಯನ್ನು ಬಳಸಿಕೊಳ್ಳಬಹುದು ಎಂದು ಮಾಜಿ ಪ್ರಧಾನಮಂತ್ರಿ ಶಂಕಿಸಿದರು.ಇಂತಹ ಪರಿಸ್ಥಿತಿಯನ್ನು ಕುದುರೆ ವ್ಯಾಪಾರಕ್ಕೆ ಬಳಸಿಕೊಳ್ಳಬಾರದು ಎಂದು ದೇವೇಗೌಡ ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿದ ಬಳಿಕ ರಾಜ್ಯದ ರಾಜ್ಯಪಾಲ ರಾಮೇಶ್ವರ ಠಾಕೂರ್ ಶಿಫಾರಸಿನನ್ವಯ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ.
|