ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಿಡಿಯಲು ಸಜ್ಜಾಗಿದೆ "ಗಣಿ ರೆಡ್ಡಿ" ಪುಸ್ತಕ ಬಾಂಬ್!
ನೆಲದಲ್ಲಿ ಹೂತು ಹೋಗಿದೆಯೇ ಎಂಬ ಶಂಕೆ ಮೂಡಿಸಿದ್ದ ಬಳ್ಳಾರಿಯ ಗಣಿ ಬಾಂಬ್ ಮತ್ತೆ ಸಿಡಿಯಲು ಸಿದ್ಧವಾಗಿದೆ. ಇದರ ಹಿಂದಿನ ರೂವಾರಿ, ಜನಾರ್ದನ ರೆಡ್ಡಿ ಮತ್ತೆ ಮೈಕೊಡವಿ ನಿಂತಿದ್ದು, ಈ ಬಾಂಬ್ ಮತದಾರರ ಮನೆ ಮನೆಯಲ್ಲಿ ತನ್ನ ಪ್ರಭಾವ ಬೀರಲು ಸಜ್ಜಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಲಂಚದ ಆರೋಪ ಹೊರಿಸಿದ್ದ "ಗಣಿ-ಧಣಿ" ಜನಾರ್ದನ ರೆಡ್ಡಿ, ಈ ಹಿಂದೆ ತಾವು ಮಾಡಿದ್ದ ಆರೋಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪುಸ್ತಕವೊಂದನ್ನು ಸಿದ್ಧಪಡಿಸಿದ್ದಾರೆ.

ಈ ಹಿಂದೆ ಗಣಿ ಲಂಚ ಪ್ರಕರಣದ ಕುರಿತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕೆಲವೇ ಕೆಲವು ಅಂಶಗಳನ್ನಷ್ಟೇ ಹೊರಹಾಕಲಾಗಿತ್ತು. ಆದರೆ ಈಗ ಪುಸ್ತಕ ರೂಪದಲ್ಲಿ ಹೊರತರುತ್ತಿರುವುದರಿಂದ ಈ ಪ್ರಕರಣದ ಹಲವು ಹನ್ನೊಂದು ಮಜಲುಗಳನ್ನು ಜನತೆಯ ಮುಂದೆ ಎಳೆ ಎಳೆಯಾಗಿ ಬಿಡಿಸಿಡಲಾಗುವುದು. ಇದನ್ನು ಓದಿದ ನಂತರ ಈ ಅಪ್ಪ-ಮಕ್ಕಳನ್ನು ರಾಜಕೀಯದಿಂದ ಹೇಗೆ ಹೊರಗಟ್ಟಬೇಕು ಎಂಬುದನ್ನು ಕರ್ನಾಟಕದ ಜನತೆ ತೀರ್ಮಾನಿಸಲಿದ್ದಾರೆ ಎಂದು ಜನಾರ್ದನ ರೆಡ್ಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈ ಹಿಂದೆ ಗಣಿ ಲಂಚ ಪ್ರಕರಣ ಹೊರಬೀಳುವ ಸಂದರ್ಭದಲ್ಲಿ ತಮಗೆ ಏನೆಲ್ಲಾ ಆಮಿಷ ಒಡ್ಡಲಾಯಿತು. ಅದಾವುದಕ್ಕೂ ತಾವು ಜಗ್ಗದಿದ್ದಾಗ ಬೆದರಿಕೆಯನ್ನೂ ಹಾಕಲಾಯಿತು. ಅಷ್ಟೇ ಅಲ್ಲದೆ, ಇತ್ತೀಚೆಗೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಮಾತುಕೊಟ್ಟು, ನಂತರ ಗಣಿ ಖಾತೆಯನ್ನು ತಮಗೇ ಬಿಟ್ಟುಕೊಡಬೇಕು ಎಂದು ಕೇಳಿದ್ದರ ಕಾರಣವೇನು? ಅದು ಇನ್ನೇನೂ ಇಲ್ಲ. ಮತ್ತಷ್ಟು ದುಡ್ಡು ಹೊಡೆಯುವ ಹುನ್ನಾರ ಅಷ್ಟೇ. ಈ ಎಲ್ಲಾ ಅಂಶಗಳು ಸದರಿ ಪುಸ್ತಕದಲ್ಲಿ ಹೊರಬೀಳಲಿವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರೂ ಸೇರಿದಂತೆ ಇತರ ಹಿರಿಯ ನಾಯಕರೊಂದಿಗೆ ಸಮಾಲೋಚಿಸಿದ ನಂತರವೇ ಸೂಕ್ತ ಸಮಯದಲ್ಲಿ, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಮತ್ತಷ್ಟು
ಕುಮಾರಸ್ವಾಮಿ ಹೊಸ ಪಕ್ಷ ಸ್ಥಾಪನೆ ಇಂಗಿತ
ಮಂಗಳೂರಿನಲ್ಲಿ ಐಶ್ – ಅಭಿ
ಕಾಂಗ್ರೆಸ್ ಬಾಗಿಲು ತಟ್ಟುವುದಿಲ್ಲ
ಮಾಟಮಂತ್ರಕ್ಕೆ ಹೆದರುವುದಿಲ್ಲ : ಯಡಿಯೂರಪ್ಪ
ವಿಪ್ ಜಾರಿ : ಚೆಲುವರಾಯಸ್ವಾಮಿ ಅಸಮಾಧಾನ
ಜೆಡಿಎಸ್ ಕುತಂತ್ರಕ್ಕೆತಕ್ಕ ಪಾಠ : ಬಿಜೆಪಿ